ಯಶಸ್ವಿಯಾಗಿ ಅತ್ಯಾಧುನಿಕ ಟೆವರ್ ಚಿಕಿತ್ಸೆ ನೀಡಿದ ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್

ಧಾರವಾಡ,:- ಉತ್ತರ ಕರ್ನಾಟಕ ಭಾಗದ ಪ್ರತಿಷ್ಠಿತ ಆಸ್ಪತ್ರೆಯಾಗಿರುವ ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್ ಅತ್ಯಾಧುನಿಕ ವ್ಯಾಸ್ಕ್ಯೂಲರ್ ಮತ್ತು ಎಂಡೋವ್ಯಾಸ್ಕೂಲರ್ ಚಿಕಿತ್ಸೆಯಲ್ಲಿ ಮಹತ್ವದ ಸಾಧನೆ ಮಾಡಿದ್ದು, ಅಪಾಯಕಾರಿಯಾದ ಥೊರಾಸಿಕ್ ಆಯೋರ್ಟಿಕ್‌ ಸಮಸ್ಯೆಗಳ ಚಿಕಿತ್ಸೆಗೆ ಥೊರಾಸಿಕ್ ಎಂಡೋ ವ್ಯಾಸ್ಕ್ಯೂಲರ್ ಆಯೋರ್ಟಿಕ್‌ ರಿಪೇರ್ (ಟೆವರ್) ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ.

Aug 1, 2025 - 06:08
 0  6
ಯಶಸ್ವಿಯಾಗಿ ಅತ್ಯಾಧುನಿಕ ಟೆವರ್ ಚಿಕಿತ್ಸೆ ನೀಡಿದ ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್
ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್

ಕನ್ಸಲ್ಟೆಂಟ್ ವ್ಯಾಸ್ಕ್ಯೂಲರ್ ಮತ್ತು ಎಂಡೋವ್ಯಾಸ್ಕ್ಯೂಲರ್ ಸರ್ಜನ್ ಡಾ. ಬಸವರಾಜೇಂದ್ರ ಆನೂರಶೆಟ್ರು ಅವರ ನೇತೃತ್ವದಲ್ಲಿ ಈ ಚಿಕಿತ್ಸೆ ನಡೆದಿದ್ದು, ಅವರಿಗೆ ಕಾರ್ಡಿಯಾಕ್ ಅರಿವಳಿಕೆ ತಜ್ಞರಾದ ಡಾ. ಪ್ರಮೋದ್ ಹೂನೂರ್‌ ಮತ್ತು ಡಾ. ಗಣೇಶ್ ನಾಯಕ್ ಹಾಗೂ ಆಸ್ಪತ್ರೆಯ ಅನುಭವಿ ಕ್ಯಾಥೆಟರೈಸೇಶನ್ ಲ್ಯಾಬ್ ಸಿಬ್ಬಂದಿ ಸೇರಿದಂತೆ ಬಹು-ವಿಭಾಗೀಯ ತಂಡಗಳು ಉತ್ತಮ ಸಹಕಾರ ನೀಡಿದವು.

ಮೊದಲ ಪ್ರಕರಣದಲ್ಲಿ ಉತ್ತರ ಕನ್ನಡದ 47 ವರ್ಷದ ಪುರುಷ ರೋಗಿಯೊಬ್ಬರು ಎದೆ ಮತ್ತು ಹೊಟ್ಟೆ ನೋವಿನ ಸಮಸ್ಯೆಯಿಂದ ಆಸ್ಪತ್ರೆಗೆ ಬಂದಿದ್ದರು. ಪರೀಕ್ಷೆ ನಡೆಸಿದಾಗ ಅವರಿಗೆ ಡಿಸೆಂಡಿಂಗ್ ಥೊರಾಕೊಅಬ್ಡಾಮಿನಲ್ ಆಯೋರ್ಟಿಕ್‌ ಆನ್ಯೂರಿಸಂ ಎಂಬ ಸಂಕೀರ್ಣ ವ್ಯಾಸ್ಕ್ಯೂಲರ್ ಸಮಸ್ಯೆ ಕಂಡು ಬಂತು. ಅದು ಒಡೆಯುವ ಹಂತದಲ್ಲಿದ್ದು, ಅಪಾಯಕಾರಿ ಸ್ಥಿತಿ ಇತ್ತು. ತಕ್ಷಣವೇ ಕಾರ್ಯಪ್ರವೃತ್ತವಾದ ತಂಡ, ಥೊರಾಸಿಕ್ ಎಂಡೋವ್ಯಾಸ್ಕ್ಯೂಲರ್ ಆಯೋರ್ಟಿಕ್‌ ರಿಪೇರ್‌ (ಟೆವರ್) ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿ ಅವರ ಸಮಸ್ಯೆ ಪರಿಹರಿಸಲಾಯಿತು.

ಎರಡನೇ ಪ್ರಕರಣ ಸ್ವಲ್ಪ ಹೆಚ್ಚು ಸಂಕೀರ್ಣವಾಗಿತ್ತು. ಗದಗ ಜಿಲ್ಲೆಯ 49 ವರ್ಷದ ಪುರುಷ ರೋಗಿಯೊಬ್ಬರು ತೀವ್ರ ಉಸಿರಾಟದ ತೊಂದರೆ ಮತ್ತು ಎಡ ಭಾಗದ ಎದೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಮಾರ್ಫನ್‌ ಸಿಂಡ್ರೋಮ್ ಎಂಬ ಅನುವಂಶಿಕ ಕಾಯಿಲೆ ಇದ್ದು, ಸುಮಾರು 15 ವರ್ಷಗಳ ಹಿಂದೆ ಬೆಂಟಾಲ್ ಎಂಬ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಆರಂಭಿಕ ಹಂತದಲ್ಲಿ ಅವರು ಗದಗದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿ ಅವರಿಗೆ ಅಕ್ಯೂಟ್ ಆಯೋರ್ಟಿಕ್‌ ಡಿಸೆಕ್ಷನ್ (ಸ್ಟಾನ್‌ಫೋರ್ಡ್ ಟೈಪ್ ಬಿ) ಜೊತೆಗೆ ಎಡಭಾಗದ ಥೊರಾಕ್ಸ್‌ ನಲ್ಲಿ ಆನ್ಯೂರಿಸಂ ಒಡೆದು ಲೆಫ್ಟ್ ಹೀಮೋಥೊರಾಕ್ಸ್ ಉಂಟಾಗಿರುವುದು ಕಂಡುಬಂದಿತ್ತು. ಆಗ ಅವರನ್ನು ತಕ್ಷಣ ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್ ಗೆ ರವಾನಿಸಲಾಯಿತು. ಅಲ್ಲಿ ಡಾ. ಬಸವರಾಜೇಂದ್ರ ಆನೂರಶೆಟ್ರು ಅತ್ಯಾಧುನಿಕ ಚಿಕಿತ್ಸೆ ಒದಗಿಸಿದರು.

ಆಸ್ಪತ್ರೆಗೆ ಬರುವಾಗಲೇ ರೋಗಿಗೆ ರಕ್ತಸ್ರಾವ ಆಗುತ್ತಿದ್ದರಿಂದ ತಕ್ಷಣವೇ ತುರ್ತು ಚಿಕಿತ್ಸೆ ನೀಡಲಾಯಿತು ಮತ್ತು ರಕ್ತ ವರ್ಗಾವಣೆ ಮಾಡಿ ಪರಿಸ್ಥಿತಿ ಸ್ಥಿರವಾಗುವಂತೆ ನೋಡಿಕೊಳ್ಳಲಾಯಿತು. ಬಳಿಕ ತಪಾಸಣೆ ಮಾಡಿದಾಗ ಅವರಿಗೆ ಥೊರಾಸಿಕ್ ಆಯೋರ್ಟಾದಿಂದ ಇಲಿಯಾಕ್ ಆರ್ಟರಿವರೆಗೆ ಟೈಪ್ ಬಿ ಆಯೋರ್ಟಿಕ್‌ ಡಿಸೆಕ್ಷನ್ ವಿಸ್ತರಿಸಿರುವುದು ಕಂಡು ಬಂತು. ಜೊತೆಗೆ ಲಾರ್ಜ್ ಮೀಡಿಯಾಸ್ಟಿನಲ್ ಹೆಮರೇಜ್ ಮತ್ತು ಲೆಫ್ಟ್ ಹೀಮೋಥೊರಾಕ್ಸ್ ಇರುವುದು ದೃಢಪಟ್ಟಿತು.

ಅವರಿಗೆ ಎರಡು-ಹಂತದ ಅತ್ಯಾಧುನಿಕ ಚಿಕಿತ್ಸೆ ನಡೆಸಬೇಕಾಗಿ ಬಂತು.

ಮೊದಲ ಹಂತದಲ್ಲಿ ಡಾ. ಬಸವರಾಜೇಂದ್ರ ಆನೂರಶೆಟ್ರು ಮತ್ತು ತಂಡವು ಬಲದಿಂದ ಎಡಗಡೆಯ ಕಾಮನ್ ಕೆರೊಟಿಡ್ ಆರ್ಟರಿ ಬೈಪಾಸ್ ನಡೆಸಿತು. ನಂತರ ಲೆಫ್ಟ್ ಕೆರೊಟಿಡ್ ಆರ್ಟರಿಯನ್ನು ಲೆಫ್ಟ್ ಸಬ್‌ ಕ್ಲಾವಿಯನ್ ಆರ್ಟರಿಗೆ ಪಿಟಿಎಫ್ಇ ಗ್ರಾಫ್ಟ್‌ ಗಳನ್ನು ಬಳಸಿ ಸಂಪರ್ಕಿಸಲಾಯಿತು. ಈ ಮೂಲಕ ಎಂಡೋವ್ಯಾಸ್ಕ್ಯೂಲರ್ ರಿಪೇರ್‌ ಹಂತಕ್ಕೆ ಮುಂದುವರಿಯುವ ಮೊದಲು ಅಡೆತಡೆಯಿಲ್ಲದೆ ರಕ್ತ ಪೂರೈಕೆ ಇರುವಂತೆ ನೋಡಿಕೊಳ್ಳಲಾಯಿತು.

ಎರಡನೇ ಹಂತದಲ್ಲಿ ರೋಗಿಯು ಥೊರಾಸಿಕ್ ಎಂಡೋವಾಸ್ಕುಲರ್ ಆಯೋರ್ಟಿಕ್‌ ರಿಪೇರ್ (ಟೆವರ್) ಚಿಕಿತ್ಸೆಗೆ ಒಳಗಾದರು. ಡಿಸೆಕ್ಷನ್‌ ನ ಪ್ರವೇಶ ಬಿಂದುವನ್ನು ಮುಚ್ಚಲು ಮತ್ತು ಆನ್ಯೂರಿಸಂ ಅನ್ನು ಹೊರಗಿಡಲು ಎರಡು ಸ್ಟಂಟ್ ಗ್ರಾಫ್ಟ್‌ ಗಳನ್ನು ಬಳಸಲಾಯಿತು. ಚಿಕಿತ್ಸೆಯ ನಂತರ ರೋಗಿಯ ಸ್ಥಿತಿಯಲ್ಲಿ ಚೇತರಿಕೆ ಕಂಡಿತು. ಅವರು ಯಾವುದೇ ಪ್ರಮುಖ ಅಂಗಗಳಿಗೆ ಯಾವುದೇ ತೊಂದರೆ ಇಲ್ಲದೆ ಒಂದು ವಾರದೊಳಗೆ ಡಿಸ್ಚಾರ್ಜ್ ಆದರು. ಅವರಿಗೆ ವಿವರವಾದ ಫಾಲೋ-ಅಪ್ ಯೋಜನೆ ಮತ್ತು ಔಷಧಗಳನ್ನು ನೀಡಲಾಗಿದೆ.

ಈ ಟೆವರ್ ಚಿಕಿತ್ಸೆ ಕುರಿತು ವೈದ್ಯರಾದ ಡಾ. ಬಸವರಾಜೇಂದ್ರ ಆನೂರಶೆಟ್ರು ವಿವರಿಸಿದಂತೆ, ಟೆವರ್ ಚಿಕಿತ್ಸಾ ವಿಧಾನದಲ್ಲಿ ತೊಡೆಯ ಭಾಗದಲ್ಲಿ ಕ್ಯಾಥೆಟರ್‌ ಅನ್ನು ದೇಹದೊಳಕ್ಕೆ ಕಳುಹಿಸಿ ಸ್ಟೆಂಟ್ ಗ್ರಾಫ್ಟ್‌ ಅನ್ನು ಸೇರಿಸಲಾಗುತ್ತದೆ. ಇದನ್ನು ಆಯೊರ್ಟಾ (ರಕ್ತನಾಳ) ಒಳಗೆ ಇರಿಸಿ, ದುರ್ಬಲಗೊಂಡ ರಕ್ತನಾಳವನ್ನು ಬಲಪಡಿಸಲಾಗುತ್ತದೆ. ರಕ್ತದ ಹರಿವನ್ನು ಮೊದಲಿನಂತೆ ಸರಿಹೋಗುವಂತೆ ಮಾಡಲಾಗುತ್ತದೆ.

ಆಸ್ಪತ್ರೆಯ ಫೆಸಿಲಿಟಿ ಡೈರೆಕ್ಟರ್ ಶ್ರೀ ಶಶಿಕುಮಾರ್ ಐ ಪಟ್ಟಣಶೆಟ್ಟಿ ಅವರು ಮಾತನಾಡಿ

"ಈ ಚಿಕಿತ್ಸಾ ವಿಧಾನವು ವ್ಯಾಸ್ಕ್ಯೂಲರ್ ಚಿಕಿತ್ಸೆಯಲ್ಲಿ ಬಹಳ ದೊಡ್ಡ ಬದಲಾವಣೆ ಉಂಟು ಮಾಡಿದೆ. ಥೊರಾಸಿಕ್ ಆಯೋರ್ಟಿಕ್‌ ಅನ್ಯೂರಿಸಮ್, ಡಿಸೆಕ್ಷನ್ ಅಥವಾ ಗಾಯದಿಂದ ಬಳಲುತ್ತಿರುವ ರೋಗಿಗಳಿಗೆ ಈ ವಿಧಾನವು ಸಾಂಪ್ರದಾಯಿಕ ಓಪನ್ ಸರ್ಜರಿಗಿಂತ ಸುರಕ್ಷಿತ ಮತ್ತು ಉತ್ತಮ ಪರ್ಯಾಯ ವಿಧಾನವಾಗಿದೆ. ನಮ್ಮ ಟೆವರ್ ಚಿಕಿತ್ಸೆಯ ಯಶಸ್ಸು, ರೋಗಿಗಳಿಗೆ ಅತ್ಯಾಧುನಿಕ ವ್ಯಾಸ್ಕ್ಯೂಲರ್ ಚಿಕಿತ್ಸೆಯನ್ನು ಒದಗಿಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. ಈ ತಂತ್ರಜ್ಞಾನವು ಓಪನ್ ಸರ್ಜರಿಯ ಅಪಾಯಗಳನ್ನು ಕಡಿಮೆ ಮಾಡುವುದಲ್ಲದೆ, ರೋಗಿಗಳು ಶೀಘ್ರ ಚೇತರಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ" ಎಂದು ಹೇಳಿದರು.

What's Your Reaction?

like

dislike

love

funny

angry

sad

wow