ರಿಮ್ಸ್‌ನಲ್ಲಿ 371(ಜೆ) ಉಲ್ಲಂಘನೆ ಸೇರಿ ಸ್ಥಳೀಯ ನೌಕರರ ಕಡೆಗಣನೆ ಅನ್ಯಾಯ ಸರಿಪಡಿಸದಿದ್ದರೆ ಹೋರಾಟದ ಎಚ್ಚರಿಕೆ - ಶಿವಕುಮಾರ ಮ್ಯಾಗಳಮನಿ
ರಾಯಚೂರು: ನಗರದ ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ರಿಮ್ಸ್)ಯಲ್ಲಿ ನಡೆಯುತ್ತಿರುವ ನೇಮಕಾತಿ ಹಾಗೂ ನಿಯೋಜನಾ ಪ್ರಕ್ರಿಯೆಯಲ್ಲಿ ಸಂವಿಧಾನದ 371(ಜೆ) ವಿಧಿಯನ್ನು ಗಾಳಿಗೆ ತೂರಿ ಕಲ್ಯಾಣ ಕರ್ನಾಟಕ ಪ್ರದೇಶದ ಉದ್ಯೋಗಿಗಳ ಮೇಲೆ ವ್ಯವಸ್ಥಿತವಾಗಿ ನಡೆಯುತ್ತಿರುವ ಅನ್ಯಾಯ
ಅನ್ಯಾಯವನ್ನು ತಕ್ಷಣವೇ ನಿಲ್ಲಿಸದಿದ್ದರೆ ಹೋರಾಟಕ್ಕೆ ಇಳಿಯಲಾಗುವುದು ಎಂದು ವಕೀಲರು ಹಾಗೂ ಸಾಮಾಜಿಕ ಹೋರಾಟಗಾರರಾದ ಶಿವಕುಮಾರ ಮ್ಯಾಗಳಮನಿ ಅವರು ಪತ್ರಿಕಾ ಹೇಳಿಕೆಯ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಅವರು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್ ರವರು ಮಧ್ಯಪ್ರವೇಶಿಸಿ ಕಲ್ಯಾಣ ಕರ್ನಾಟಕ ಭಾಗದ ಜನರ ಸಂವಿಧಾನಾತ್ಮಕ ಹಕ್ಕುಗಳನ್ನು ಉಲಂಘಿಸುತ್ತಿರುವ ಮತ್ತು ಕುಂಟು ನೆಪಗಳನ್ನಿಟ್ಟುಕೊಂಡು ಸ್ಥಳೀಯ ನೌಕರರನ್ನು ವಿನಾಕಾರಣ ಉನ್ನತ, ಜವಾಬ್ದಾರಿ ಹುದ್ದೆಗಳನ್ನು ನೀಡದಿರುವ ರಿಮ್ಸ್ ಆಡಳಿತ ಮಂಡಳಿಯ ವಿರುದ್ಧ ತಕ್ಷಣವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ರೀಮ್ಸ್ ಸಂಸ್ಥೆಯ ಡೀನ್ ಡಾ. ರಮೇಶ ಬಿ.ಎಚ್. ಅವರು ತಮ್ಮ ಹುದ್ದೆಯ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ಕಲ್ಯಾಣ ಕರ್ನಾಟಕೇತರ ಉದ್ಯೋಗಿಗಳಿಗೆ ಏಕಪಕ್ಷೀಯವಾಗಿ ಹೆಚ್ಚಿನ ಅನುಕೂಲ ಕಲ್ಪಿಸುತ್ತಿದ್ದು, ಅರ್ಹತೆ, ಅನುಭವ ಮತ್ತು ಜೇಷ್ಠತೆಯಿದ್ದರೂ ಕಲ್ಯಾಣ ಕರ್ನಾಟಕ ಭಾಗದ ಉದ್ಯೋಗಿಗಳನ್ನು ಉದ್ದೇಶಪೂರ್ವಕವಾಗಿ ಅವಕಾಶವಂಚಿತರನ್ನಾಗಿಸುತ್ತಿದ್ದಾರೆ.
ಕಳೆದ ವರ್ಷ ರಿಮ್ಸ್ ಸಂಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ ಬಿ.ಎಸ್ಸಿ. ನರ್ಸಿಂಗ್ ಕಾಲೇಜಿಗೆ 371(ಜೆ) ನಿಯಮಗಳನ್ವಯ ಕಡ್ಡಾಯವಾಗಿ ಕಲ್ಯಾಣ ಕರ್ನಾಟಕ ಪ್ರದೇಶದವರನ್ನೇ ಪ್ರಾಚಾರ್ಯರನ್ನಾಗಿ ನೇಮಿಸಬೇಕೆಂದು ನಿಯಮಗಳಿದ್ದರು ಅದನ್ನು ಲೆಕ್ಕಿಸದೆ, ಕಡಿಮೆ ಅರ್ಹತೆ ಮತ್ತು ಕಡಿಮೆ ಅನುಭವ ಹೊಂದಿರುವ ಕಲ್ಯಾಣ ಕರ್ನಾಟಕೇತರ ಉದ್ಯೋಗಿಗೆ ಪ್ರಾಚಾರ್ಯರ ಹುದ್ದೆ ನೀಡಿ ಸಂವಿಧಾನ ವಿರೋಧಿ ಕ್ರಮವನ್ನು ಅನುಸರಿಸುತ್ತಿದ್ದಾರೆ.
ಶ್ರೂಶ್ರಕಾಧಿಕಾರಿಗಳ ಮೇಲ್ವಿಚಾರಕರನ್ನು ಮತ್ತು ಸಹಾಯ ಅಧಿಕಾರಿಗಳನ್ನು ನೇಮಕ ಮಾಡುವಲ್ಲಿ ಕೂಡ ತಾರತಮ್ಯ ಎಸೆಗಿರುವುದು ಖಂಡನೀಯ. ಅಲ್ಲದೆ, ಬಿ.ಎಸ್ಸಿ. ನರ್ಸಿಂಗ್ ಕಾಲೇಜಿಗೆ ಕ್ಲಿನಿಕಲ್ ನರ್ಸಿಂಗ್ ವಿಭಾಗದಿಂದ ನಿಯೋಜನೆ ಮಾಡುವ ಸಂದರ್ಭದಲ್ಲಿ ಶೇ.75 ರಷ್ಟು ಹುದ್ದೆಗಳನ್ನು ಕಡ್ಡಾಯವಾಗಿ ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಮಾತ್ರ, ಅರ್ಹತೆ, ಅನುಭವ ಮತ್ತು ಜೇಷ್ಠತೆಯ ಆಧಾರದಲ್ಲಿ ನಿಯೋಜಿಸಬೇಕು, ಶೇ.25 ರಷ್ಟು ಹುದ್ದೆಗಳನ್ನು ಮೆರಿಟ್ ಆಧಾರದಲ್ಲಿ ಸಾಮಾನ್ಯವಾಗಿ ನಿಯೋಜಿಸಬೇಕು ಎಂಬ ನಿಯಮವಿದ್ದರೂ ಇದನ್ನೂ ಉಲ್ಲಂಘಿಸಿದ್ದಾರೆ.
ಇದಷ್ಟೇ ಅಲ್ಲದೆ, ಕಲ್ಯಾಣ ಕರ್ನಾಟಕ ಪ್ರದೇಶದಲ್ಲೇ ಇರುವ ರಿಮ್ಸ್ ಸಂಸ್ಥೆಗೆ ಕಲ್ಯಾಣ ಕರ್ನಾಟಕೇತರ ವ್ಯಕ್ತಿಯನ್ನು ಡೀನ್ ಆಗಿ ನೇಮಿಸಿರುವುದು ಸ್ವತಃ ಕಲ್ಯಾಣ ಕರ್ನಾಟಕ ಹಕ್ಕುಗಳಿಗೆ ಮಾಡಿದ ನೇರ ದ್ರೋಹವಾಗಿದೆ ಏಕೆಂದರೆ ಅವರು ಬೇರೆ ಭಾಗದವರು ಆಗಿರುವುದರಿಂದ ಅವರು ಸ್ಥಳೀಯ ನೌಕರರಸ್ಥರನ್ನು ಕಡೆಗಣಿಸಿ ತಮ್ಮ ಭಾಗದವರ ಹಿತವನ್ನು ಕಾಪಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಈ ಎಲ್ಲ ಸಂವಿಧಾನ ವಿರೋಧಿ, ಅನ್ಯಾಯಕರ ಕ್ರಮಗಳನ್ನು ತಕ್ಷಣವೇ ಹಿಂಪಡೆಯದಿದ್ದರೆ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ರಿಮ್ಸ್ ಕಚೇರಿ ಎದುರು ಧರಣಿ ಮತ್ತು ಜಿಲ್ಲಾ ಉಸ್ತುವಾರಿ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ರವರಿಗೆ ಘೆರಾವ್ ಹಾಕಿ ಹೋರಾಟ ಮಾಡಲಾಗುವುದು ಮುಂದೆ ಆಗುವ ಪರಿಣಾಮಗಳಿಗೆ ರಿಮ್ಸ್ ಆಡಳಿತ ಮತ್ತು ಸಂಬಂಧಿಸಿದ ಇಲಾಖೆಗಳ ಕಾರಣವಾಗಿರುತ್ತದೆಂದು ಅವರು ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದಾರೆ.
What's Your Reaction?



