ಜನರ ಉತ್ಸವವಲ್ಲ, ಅಧಿಕಾರಿ ಶಾಹಿ ವ್ಯವಸ್ಥೆಯ ರಾಜಕಾರಣಿಗಳ ಉತ್ಸವ: ದೊಡ್ಡಪ್ಪ ಮುರಾರಿ ಕಳವಳ
ಮಸ್ಕಿ:ಫೆ 3, ರಾಯಚೂರು ಉತ್ಸವ ಜನರ ಉತ್ಸವವೇ? ಅಥವಾ ಅಧಿಕಾರಿಗಳ ಮತ್ತು ರಾಜಕಾರಣಿಗಳ ಉತ್ಸವವೇ? ಎಂದು ಜಿ.ಪಂ ಮಾಜಿ ಸದಸ್ಯ ದೊಡ್ಡಪ್ಪ ಮುರಾರಿ ಪ್ರಶ್ನಿಸಿದ್ದಾರೆ.
ಜ್ಯೋತಿ ರಥಯಾತ್ರೆ ಮಸ್ಕಿ ಪಟ್ಟಣದ ಆಗಮಿಸಿದಾಗ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಮಹಾತ್ಮ ಗಾಂಧಿ ಹಾಗೂ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುತ್ತಳಿಗಳಿಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮಾಲಾರ್ಪಣೆ ಮಾಡಿದರು.
ವಿದ್ಯಾರ್ಥಿಗಳು, ಶಿಕ್ಷಕರು, ತಹಸೀಲ್ದಾರರು, ಪುರಸಭೆ ಅಧ್ಯಕ್ಷರು ಹಾಗೂ ಸದಸ್ಯರು ಜ್ಯೋತಿ ರಥಯಾತ್ರೆಯೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ದೊಡ್ಡಪ್ಪ ಮುರಾರಿ,ಇದು ಜನಸಾಮಾನ್ಯರ ಉತ್ಸವವಾಗಬೇಕಿತ್ತು. ಆದರೆ ಇಂದು ಇದು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಶಾಹಿ ವ್ಯವಸ್ಥೆಯ ಉತ್ಸವದಂತೆ ಕಾಣುತ್ತಿದೆ. ರೈತರು, ಕಾರ್ಮಿಕರು ಸಂಕಷ್ಟದಲ್ಲಿ ಬದುಕುತ್ತಿದ್ದಾರೆ. ಅವರ ಸಮಸ್ಯೆಗಳಿಗೆ ಪರಿಹಾರ ನೀಡುವ ಬದಲು ದುಂದು ವೆಚ್ಚ ಮಾಡಿ ಉತ್ಸವ ನಡೆಸುವುದು ಯೋಗ್ಯವಲ್ಲ ಎಂದು ಟೀಕಿಸಿದರು.
ಇದೇ ವೇಳೆ ಮಾತನಾಡಿದ ಜನಕವಿ ಹಾಗೂ ದಲಿತ ಕವಿ ಸಿ. ದಾನಪ್ಪ ನಿಲಗಲ್, ಉತ್ಸವ ಜನಮಾನಸದ ಉತ್ಸವವಾಗಬೇಕು. ತೋರಿಕೆಯ ಉತ್ಸವವಾಗಬಾರದು. ಬಡಜನರ, ಕೂಲಿಕಾರ್ಮಿಕರ, ವಿದ್ಯಾರ್ಥಿಗಳ ಹಾಗೂ ಯುವಜನರ ಬದುಕಿನಲ್ಲಿ ಬದಲಾವಣೆ ತರದ ಉತ್ಸವಕ್ಕೆ ಅರ್ಥವೇ ಇಲ್ಲ ಎಂದು ಹೇಳಿದರು.
“ಕೋಟಿಗಟ್ಟಲೆ ಹಣ ಖರ್ಚು ಮಾಡಿ ಉತ್ಸವ ಮಾಡಿದರೆ ಮಾತ್ರ ಕಲ್ಯಾಣ ಕರ್ನಾಟಕ ನಿರ್ಮಾಣವಾಗುವುದಿಲ್ಲ ಎಂದು ಅವರು ಎಚ್ಚರಿಸಿದರು.
ಇಂದು ಉಳಿಯುವ ಪ್ರಶ್ನೆ ಒಂದೇ—
ಜನರ ನೋವಿಗೆ ಸ್ಪಂದಿಸದ ಉತ್ಸವ ಯಾರಿಗಾಗಿ, ರೈತ, ಕಾರ್ಮಿಕ, ವಿದ್ಯಾರ್ಥಿಗಳ ಬದುಕು ಸುಧಾರಿಸದ ಉತ್ಸವಕ್ಕೆ ಅರ್ಥವೇನು, ರಾಯಚೂರು ಉತ್ಸವ ಸಂಭ್ರಮದ ವೇದಿಕೆಯಾಗಬೇಕೇ, ಅಥವಾ ಆತ್ಮಪರಿಶೀಲನೆಯ ವೇದಿಕೆಯಾಗಬೇಕು ಎಂದು ಪ್ರಶ್ನಿಸಿದರು.
What's Your Reaction?



