ಕೆ. ಎಸ್. ನಿಸಾರ್ ಅಹಮದ್ ರವರ ನೆನಪು
ಕೆ. ಎಸ್. ನಿಸಾರ್ ಅಹಮದ್ ಅಂದ ತಕ್ಷಣ ನಮಗೆ ನೆನಪಾಗೋದೇ 'ನಿತ್ಯೋತ್ಸವ’ದ ಕವಿ ಅಂತ. ಜೋಗದ ಸಿರಿಬೆಳಕಿನಲ್ಲಿ ಹಾಡನ್ನು ಹಾಡಿಕೊಂಡಾಗಲೆಲ್ಲಾ ಅದೇನೋ ತುಂಬು ಆನಂದ ಸಿಗುತ್ತದೆ.

ನಿಸಾರ್ ಅಹಮದ್ ಅವರು ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ 1936ರ ಫೆಬ್ರುವರಿ 5ರಂದು ಜನಿಸಿದರು. 1959ರಲ್ಲಿ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1994ರವರೆಗೆ ವಿವಿಧ ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗು ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾದರು.
ಕವಿಯಾಗಿ ನಿಸಾರರು ‘ಮನಸ್ಸು ಗಾಂಧಿಬಜಾರು’, ‘ನಿತ್ಯೋತ್ಸವ’, ‘ನೆನೆದವರ ಮನದಲ್ಲಿ’, ‘ನಾನೆಂಬ ಪರಕೀಯ’, ‘ಅನಾಮಿಕ ಆಂಗ್ಲರು’, ‘ಸುಮಹೂರ್ತ’, ‘ಸಂಜೆ ಐದರ ಮಳೆ’, ‘ಸ್ವಯಂ ಸೇವೆಯ ಗಿಳಿಗಳು’ ಮುಂತಾದ ಕವನ ಸಂಕಲನಗಳನ್ನು ಪ್ರಕಟಿಸಿದ್ದರು.
ಗದ್ಯ ಸಾಹಿತ್ಯದಲ್ಲಿ ‘ಅಚ್ಚುಮೆಚ್ಚು’, ‘ಇದು ಬರಿ ಬೆಡಗಲ್ಲೋ ಅಣ್ಣ’ ಮುಂತಾದವು ಅವರ ಪ್ರಮುಖ ಕೃತಿಗಳು. ಷೇಕ್ಸ್ ಪಿಯರನ 'ಒಥೆಲ್ಲೊ' ಹಾಗೂ 'ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್' ಕೃತಿಗಳನ್ನು ಕೂಡಾ ಕನ್ನಡಕ್ಕೆ ಭಾಷಾಂತರಿಸಿದ್ದರು. ಚಿಲಿ ದೇಶದ ಕವಿ ಪಾಬ್ಲೋ ನೆರುಡಾ ಅವರ ಕವನವನ್ನು ‘ಬರೀ ಮರ್ಯಾದಸ್ತರೆ’ ಎಂಬ ಹೆಸರಿನಲ್ಲಿ ರೂಪಾಂತರಿಸಿದ್ದಾರೆ. ಕವಿ ಇಕ್ಬಾಲ್ ಅವರ ಕೃತಿ ‘ಸಾರೇ ಜಹಾಂಸೆ ಅಚ್ಚ’ ಕಾವ್ಯವನ್ನು ಕೂಡ ಕನ್ನಡಕ್ಕೆ ತಂದಿದ್ದರು.
ಪದ್ಮಶ್ರೀ ಪ್ರಶಸ್ತಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯಿಂದ, ಪಂಪ ಪ್ರಶಸ್ತಿಯವರೆಗೆ ಹಲವಾರು ಪ್ರಶಸ್ತಿ ಗೌರವಗಳು ನಿಸಾರರನ್ನು ಅಲಂಕರಿಸಿದ್ದವು. ನಿಸಾರ್ ಅಹಮದ್ 2020ರ ಮೇ 3ರಂದು ತಮ್ಮ ಬದುಕಿಗೆ ಅಂತ್ಯ ಹಾಡಿದರು.
What's Your Reaction?






