ಮಹತ್ವಕಾಂಕ್ಷಿ ಯೋಜನೆ ಜ್ಞಾನಸೇತು ಕಾರ್ಯಕ್ರಮಕ್ಕೆ ರಾಯಚೂರಿನಲ್ಲಿ ಚಾಲನೆ

ರಾಯಚೂರು ಸೆಪ್ಟೆಂಬರ್ 09 : ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಜ್ಞಾನಸೇತು ಕಾರ್ಯಕ್ರಮಕ್ಕೆ ಯರಮರಸ್ ಡಯಟ್ ಪ್ರಾಚಾರ್ಯರಾದ ಚಂದ್ರಶೇಖರ್ ಭಂಡಾರಿ ಅವರು ಇತ್ತೀಚೆಗೆ ಚಾಲನೆ ನೀಡಿದರು.ಶಾಲಾ ಶಿಕ್ಷಣ ( ಪದವಿ ಪೂರ್ವ ) ರಾಯಚೂರು ಹಾಗೂ ಡಯಟ್ ಯರಮರಸ್ ಇವರ ಸಹಯೋಗದಲ್ಲಿ ಪದವಿ ಪೂರ್ವ ಉಪನ್ಯಾಸಕರಿಗೆ ನಡೆದ ಈ ಕಾರ್ಯಕ್ರಮದಲ್ಲಿ ಪಿಯುಸಿ ಪ್ರಥಮ ವರ್ಷ ಹಾಗೂ ದ್ವಿತೀಯ ವರ್ಷದ ಭೌತಶಾಸ್ತ್ರ ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ, ಗಣಕ ವಿಜ್ಞಾನ, ಇಂಗ್ಲೀಷ್, ಅರ್ಥಶಾಸ್ತ್ರ ಈ ಏಳು ವಿಷಯಗಳ 150 ವಿಷಯ ಉಪನ್ಯಾಸಕರು ಹಾಜರಿದ್ದರು.ಈ ವೇಳೆ ಚಂದ್ರಶೇಖರ್ ಭಂಡಾರಿ ಅವರು ಮಾತನಾಡಿ, ಜ್ಞಾನಸೇತು ಎನ್ನುವುದು ಅಂತಾರಾಷ್ಟ್ರೀಯ ಖ್ಯಾತಿಯ ತರಬೇತಿ ಸಂಸ್ಥೆ ಖಾನ್ ಅಕಾಡೆಮಿಯಿಂದ ಪಠ್ಯಕ್ರಮ ಆಧರಿತ ಕಠಿಣ ವಿಷಯಗಳಲ್ಲಿ ಡಿಜಿಟಲ್ ಕಲಿಕಾ ಮಾಧ್ಯಮ ಮೂಲಕ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ಉಪಯುಕ್ತವಾಗಿದ್ದು, ಇದರ ಪ್ರಯೋಜನ ಪಡೆದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು ಎಂದು ತಿಳಿಸಿದರು.ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಸೋಮಶೇಖರ ಹೊಕ್ರಾಣಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕಡ್ಡಾಯವಾಗಿ ಜ್ಞಾನಸೇತು ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಬೇಕು. ಯಾವುದೇ ರೀತಿಯ ಲೋಪ ಆಗದಂತೆ ಯಶಸ್ವಿಗೊಳಿಸಲು ಉಪನ್ಯಾಸಕರಿಗೆ ಸೂಚಿಸಿದರು.ಜ್ಞಾನ ಸೇತು ಕಾರ್ಯಕ್ರಮದ ಜಿಲ್ಲಾ ನೋಡಲ್ ಅಧಿಕಾರಿಗಳು ಆಗಿರುವ ಡಯಟ್ ಯರಮರಸ್‌ನ ಉಪನ್ಯಾಸಕರಾದ ಸುಖದೇವ ಅವರು ಕಾರ್ಯಕ್ರಮದ ರೂಪರೇಷೆಗಳ ಬಗ್ಗೆ ತಿಳಿಸಿದರು.ಡಯಟ್ ಯರಮರಸ್‌ನ ಹಿರಿಯ ಉಪನ್ಯಾಸಕರಾದ ಮಲ್ಲಿಕಾರ್ಜುನ್ ಅವರು ಉಪನ್ಯಾಸಕರನ್ನುದ್ದೇಶಿಸಿ ಮಾರ್ಗದರ್ಶನ ನೀಡಿದರು.ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಾಂಶುಪಾಲರು ಮತ್ತು ನೋಡಲ್ ಅಧಿಕಾರಿಗಳಾದ ಡಾ.ರವೀಂದ್ರ ಬಂಡಿಅವರು ಪ್ರಾಸ್ತಾವಿಕ ಮಾತನಾಡಿದರು.ಹಿರಿಯ ಪ್ರಾಂಶುಪಾಲರಾದ ಡಾ.ಕುಂಟೆಪ್ಪ, ಗೌರಿಪುರ ಕಾಲೇಜಿನ ಪ್ರಾಂಶುಪಾಲರಾದ ಚನ್ನಬಸಪ್ಪ, ಸಂಪನ್ಮೂಲ ವ್ಯಕ್ತಿಗಳಾದ ಸಿದ್ದನಗೌಡ, ಲಕ್ಷ್ಮಣ್, ಶರಣಮ್ಮ, ಕವಿತಾ ಉಪಸ್ಥಿತರಿದ್ದರು. ಉಪನ್ಯಾಸಕರಾದ ರಾಮಕೃಷ್ಣ ಕೆ.ವಿ. ಸ್ವಾಗತಿಸಿದರು. ಉಪನ್ಯಾಸಕ ರಾಜಕುಮಾರ ಶೆಟ್ಟಿ ವಂದಿಸಿದರು.
What's Your Reaction?






