ವಿಜ್ಞಾನ ಎಂಬುದು ಆಧ್ಯಾತ್ಮಿಕ ಸತ್ಯದ ಪುಟ್ಟ ಕೂಸು : ವೀರೇಶಾನಂದ ಸರಸ್ವತಿ ಸ್ವಾಮೀಜಿ
ತುರುವೇಕೆರೆ : ವಿಜ್ಞಾನ ಎಂಬುದು ಇಂದ್ರಿಯ ಗ್ರಾಹ್ಯವಾದ ಸತ್ಯವಾದ್ದರಿಂದ ಆಧ್ಯಾತ್ಮ ಕೇಂದ್ರಿತ ಇಂದ್ರೀಯಾತೀತ ಸತ್ಯದ ಒಂದು ಪುಟ್ಟ ಕೂಸು ಎಂದು ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಲಯನ್ಸ್ ಭವನದಲ್ಲಿ ಲಯನ್ಸ್ ಕ್ಲಬ್, ಸುರಭಿಸಂಗಮ, ರೋಟರಿ ಕ್ಲಬ್ ಸಂಯುಕ್ತಾಶ್ರಯದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕರ್ಣಾಟಕ ಬ್ಯಾಂಕ್ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವ ಆಚರಣೆ ಮತ್ತು ಸ್ವಾತಂತ್ರ್ಯ ಯೋಧ ಡಿ.ರಾಮಸ್ವಾಮಿ ಚರ್ಚಾಸ್ಪರ್ಧೆ ಬಹುಮಾನ ವಿತರಣಾ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಆಧ್ಯಾತ್ಮ ಮತ್ತು ವಿಜ್ಞಾನ ಎರಡೂ ಬೇರೆ ಬೇರೆಯಲ್ಲ, ಅವುಗಳಲ್ಲಿ ವೈರುದ್ಯವಿಲ್ಲ. ಮನುಷ್ಯನ ಇಂದ್ರಿಯ ಜ್ಞಾನಕ್ಕೆ ಅತೀತವಾದ ಹಂತದಲ್ಲಿ ತಿಳುವಳಿಕೆಯನ್ನು ಆಧ್ಯಾತ್ಮ ನೀಡುತ್ತದೆ. ಹೆಚ್ಚಿನ ಜ್ಞಾನ ನೀಡುವ ಆಧ್ಯಾತ್ಮ ಹಾಗೂ ಸೀಮಿತ ಚೌಕಟ್ಟಿನಲ್ಲಿ ಜ್ಞಾನ ಕೊಡುವ ವಿಜ್ಞಾನ ಎರಡೂ ಒಂದೇ ಕಡೆ ಸಂಚರಿಸುವ ಸಂಬಂಧಪಟ್ಟ ಆವಿಷ್ಕಾರಗಳೇ ಹೊರತು ವೈರುದ್ಯವಲ್ಲ ಎಂದರು.
ಭಾಷಾ ಶಿಕ್ಷಕರುಗಳು ವಿಜ್ಞಾನದ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುವುದು ಬಹಳ ಒಳ್ಳೆಯದು ಎಂದ ಅವರು, ಪ್ರಸ್ತುತ ಸಮಾಜದಲ್ಲಿ ವಿಜ್ಞಾನ ಓದಿದವರು ಧರ್ಮ, ಆಧ್ಯಾತ್ಮದ ಬಗ್ಗೆ ಮಾತನಾಡುವುದಕ್ಕಿಂತ ಹೆಚ್ಚಾಗಿ ಭಾಷಾ ಶಿಕ್ಷಕರು ಆಧ್ಯಾತ್ಮ ಹಾಗೂ ವಿಜ್ಞಾನವನ್ನು ವೈರುದ್ಯವಾಗಿ ಬಿಂಬಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಆದರೆ ಆಧ್ಯಾತ್ಮ ಎಂಬುದು ಆಂತರಿಕ ಜಗತ್ತನ್ನು ಅನ್ವೇಷಿಸಿದರೆ, ವಿಜ್ಞಾನ ಭೌತಿಕ ಜಗತ್ತನ್ನು ಅನ್ವೇಷಿಸುತ್ತದೆ. ವಿಜ್ಞಾನ ಮತ್ತು ಆಧ್ಯಾತ್ಮ ಎರಡೂ ಪರಸ್ಪರ ಪೂರಕವಾಗಿದೆ ಎಂದರು.
ಕಾರ್ಗಿಲ್ ವಿಜಯೋತ್ಸವದ ಬಗ್ಗೆ ಬರಹಗಾರ ತುರುವೇಕೆರೆ ಪ್ರಸಾದ್ ಮಾತನಾಡಿ, ಚರಿತ್ರೆಯ ಒಂದೊಂದು ಘಟನೆಯೂ ಕೂಡ ನಮ್ಮ ಭವಿಷ್ಯದ ದಿಕ್ಸೂಚಿಯಾಗಬೇಕಿದೆ. ದೇಶದ ಐಕ್ಯತೆ, ಭಾವನಾತ್ಮಕ ಒಟ್ಟುಗೂಡಿಕೆಗೆ, ಸಮಗ್ರತೆಗೆ, ಅಖಂಡತೆಗೆ ಅದೊಂದು ಪಾಠವಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ದೇಶದ ಚರಿತ್ರೆಯನ್ನು ಅಧ್ಯಯನ ಮಾಡಬೇಕು. ಕಾರ್ಗಿಲ್ ವಿಜಯೋತ್ಸವ ಕೇವಲ ಒಂದು ದಿನದ ಆಚರಣೆಯಾಗದೆ ದೇಶಕ್ಕಾಗಿ ಹೋರಾಡಿದ, ವೀರ ಮರಣವನ್ನಪ್ಪಿದ ಯೋಧರ ತ್ಯಾಗ, ಬಲಿದಾನ ನಮ್ಮೆಲ್ಲರಿಗೂ ಸ್ಪೂರ್ತಿಯಾಗಬೇಕು. ಯುವಸಮೂಹ ಹೆಚ್ಚಿರುವ ಭಾರತ ದೇಶದಲ್ಲಿ ದೇಶಪ್ರೇಮ ಎಂಬುದು ಪ್ರತಿಯೊಬ್ಬರ ಹೃದಯದಲ್ಲಿ ಮೊಳಗಬೇಕಿದೆ. ಸದೃಢ ರಾಷ್ಟ್ರ ನಿರ್ಮಾಣಕ್ಕೆ ಮುನ್ನುಡಿಯಾಗಬೇಕಿದೆ ಎಂದರು.
ನಿಮ್ಹಾನ್ ಮಾಜಿ ನಿರ್ದೇಶಕ ಡಾ.ಡಿ.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಸೇನೆಯ ಎಕ್ಸ್ ನಾಯಕ್ ಎಸ್.ಸಿ. ಹನುಮಂತರಾಯ ಅವರನ್ನು ಸನ್ಮಾನಿಸಲಾಯಿತು. ಚರ್ಚಾಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪಪಂ ಸದಸ್ಯ ಚಿದಾನಂದ್, ಶ್ರೀ ಸತ್ಯಗಣಪತಿ ಸೇವಾ ಸಮಾಜದ ಅಧ್ಯಕ್ಷ ಆರ್.ಮಲ್ಲಿಕಾರ್ಜುನ್, ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪದ ಅಧ್ಯಕ್ಷೆ ಇಂದಿರಾ ಪ್ರಭಾಕರ್, ಲಯನ್ಸ್ ಕ್ಲಬ್ ಅಧ್ಯಕ್ಷ ಹೆಚ್.ಎನ್. ಪರಮೇಶ್ವರಸ್ವಾಮಿ, ಕಾರ್ಯದರ್ಶಿ ಡಾ.ನಾಗರಾಜ್ ಸೇರಿದಂತೆ ಲಯನ್ಸ್ ಪದಾಧಿಕಾರಿಗಳು, ಚರ್ಚಾ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
What's Your Reaction?






