ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಗೆ ಅಗತ್ಯ ಸಿದ್ಧತೆಯಾಗಲಿ: ನಿತೀಶ್ ಕೆ

ರಾಯಚೂರು ಸೆಪ್ಟೆಂಬರ್ 09 : ಜಿಲ್ಲಾದ್ಯಂತ ಸೆ.17ರಂದು ಆಚರಿಸಲ್ಪಡುವ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಗೆ ಅಗತ್ಯ ಸಿದ್ಧತೆ

Sep 10, 2025 - 08:12
 0  7
ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಗೆ ಅಗತ್ಯ ಸಿದ್ಧತೆಯಾಗಲಿ: ನಿತೀಶ್ ಕೆ
ವರದಿ :ಎಸ್. ಖಾಜಾ

ರಾಯಚೂರು ಜಿಲ್ಲಾದ್ಯಂತ ಸೆ.17ರಂದು ಆಚರಿಸಲ್ಪಡುವ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸೆಪ್ಟೆಂಬರ್ 9ರಂದು ನಡೆದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಲ್ಯಾಣ ಕರ್ನಾಟಕ ಉತ್ಸವ ದಿನದ ನಿಮಿತ್ತ ಅಂದು ಬೆಳಗ್ಗೆ 8 ಗಂಟೆಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ ಹಾಗೂ ಗಾಂಧೀಜಿಯವರ ಪುತ್ಥಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್ ಹಾಗೂ ಗಣ್ಯರು ಮಾಲಾರ್ಪಣೆ ಮಾಡಲಿದ್ದು ಈ ಎರಡು ವತ್ತಗಳ ಬಳಿಯಲ್ಲಿ ಶ್ಯಾಮಿಯಾನ ಹಾಕಬೇಕು. ಹೂವಿನಹಾರಗಳಿಂದ ಪುತ್ಥಳಿಗಳನ್ನು ಅಲಂಕೃತಗೊಳಿಸಬೇಕು. ಸುಣ್ಣಬಣ್ಣದ ವ್ಯವಸ್ಥೆ ಮಾಡಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು, ಪಾಲಿಕೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಂದು ಬೆಳಗ್ಗೆ 9 ಗಂಟೆಗೆ ಕಲ್ಯಾಣ ಕರ್ನಾಟಕ ಉತ್ಸವದ ದಿನದ ಧ್ವಜಾರೋಹಣಕ್ಕಾಗಿ ಜಿಲ್ಲಾ ಮಹಾತ್ಮಗಾಂಧೀ ಕ್ರೀಡಾಂಗಣವನ್ನು ಸಿದ್ಧಪಡಿಸಬೇಕು. ಅಲ್ಲಿ ಶ್ಯಾಮಿಯಾನ್ ಅಳವಡಿಸಬೇಕು. ಸ್ವಾತಂತ್ರö್ಯ ಹೋರಾಟಗಾರರು, ಜನಪ್ರತಿನಿಧಿಗಳು, ಗಣ್ಯರು, ಪತ್ರಕರ್ತರಿಗೆ ಪ್ರತ್ಯೇಕವಾಗಿ ಯಾವುದೇ ರೀತಿಯಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗದಂತೆ ಆಸನದ ವ್ಯವಸ್ಥೆ ಮಾಡಬೇಕು. ಮೈಕಸೆಟ್ ಅಳವಡಿಸಬೇಕು. ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಯಿತು.

ಧ್ವಜಾರೋಹಣ ಕಾರ್ಯಕ್ರಮ ಹಿನ್ನೆಲೆಯಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿನ ವೇದಿಕೆಯನ್ನು ಹೂಗಿಡಗಳಿಂದ ಅಲಂಕರಿಸಬೇಕು ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಯಿತು. ಜಿಲ್ಲಾ ಕ್ರೀಡಾಂಗಣದ ಪ್ರವೇಶದ್ವಾರದಲ್ಲಿ ರಂಗೋಲಿ ಹಾಕಲು ಕ್ರಮವಹಿಸಬೇಕು ಎಂದು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಯಿತು.

ಆಯಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯು ಆಯಾ ಜಿಲ್ಲಾ ಕಚೇರಿಗಳಲ್ಲಿ ಧ್ವಜಾರೋಹಣ ನೆರವೇರಿಸಿ, ಬಳಿಕ ಎಲ್ಲ ಅಧಿಕಾರಿಗಳು ಸಿಬ್ಬಂದಿಯು ಮಹಾತ್ಮಗಾಂಧೀ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಕಡ್ಡಾಯ ಹಾಜರಾಗಬೇಕು. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಧ್ವಜಾರೋಹಣ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವರ ಭಾಷಣ ಸಿದ್ಧಪಡಿಸಲು ಜಿಲ್ಲಾ ವಾರ್ತಾಧಿಕಾರಿಗಳಿಗೆ ಸೂಚಿಸಲಾಯಿತು. ಧ್ವಜಾರೋಹಣದ ಬಳಿಕ ಸಚಿವರು ಪತ್ರಿಕಾಗೋಷ್ಠಿ ನಡೆಸಲಿದ್ದು, ಇದಕ್ಕೆ ಅಗತ್ಯ ಏರ್ಪಾಡು ಮಾಡಬೇಕು ಎಂದು ರಾಯಚೂರ ತಹಸೀಲ್ದಾರಗಳಿಗೆ ತಿಳಿಸಲಾಯಿತು.

ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳು ಮತ್ತು ವಿವಿಧ ತುಕಡಿಗಳಿಂದ ನಡೆಯುವ ಪಥಸಂಚಲನದ ಪೂರ್ವ ಸಿದ್ಧತೆಯು ಸೆಪ್ಟೆಂಬರ್ 13 ರಿಂದ ಸೆಪ್ಟೆಂಬರ್ 15ರವರೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಅಭ್ಯಾಸಕ್ಕೆ ಆಗಮಿಸುವ ವಿದ್ಯಾರ್ಥಿಗಳು, ಪೊಲೀಸ್, ಗೃಹರಕ್ಷಕ ದಳ ಸೇರಿದಂತೆ ಇನ್ನೀತರ ಸಿಬ್ಬಂದಿಗೆ ಉಪಹಾರ, ಚಹಾ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಪಾಲಿಕೆ, ಆರ್‌ಟಿಓ ಮತ್ತು ಜಿಲ್ಲಾ ನೋಂದಣಿ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ್ ಕಾಂದೂ, ಎರಡನೇ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ರಾಯಚೂರು ಸಹಾಯಕ ಆಯುಕ್ತರಾದ ಗಜಾನನ ಬಾಳೆ, ರಾಯಚೂರು ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಸಂತೋಷ ರಾಣಿ, ಡಿವೈಎಸ್ಪಿ ಪರಮಾನಂದ, ರಾಯಚೂರು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಈರಣ್ಣ ಬಿರಾದಾರ, ಸೇವಾದಳ ವಿದ್ಯಾಸಾಗರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

What's Your Reaction?

like

dislike

love

funny

angry

sad

wow