ನಿವೃತ್ತ ಐಜಿಪಿ ಓಂ ಪ್ರಕಾಶ್ ಬರ್ಬರ ಹತ್ಯೆ

ಬೆಂಗಳೂರು: ನಿವೃತ್ತ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್ ಅವರ ಮೃತದೇಹ ರಕ್ತದ ಮಡುವಿನಲ್ಲಿ ಬೆಂಗಳೂರು ನಗರದ ಹೆಚ್ಎಸ್ಆರ್ ಲೇಔಟ್ನ ಅವರ ನಿವಾಸದಲ್ಲಿ ಪತ್ತೆಯಾಗಿದೆ. ಘಟನೆ ನಡೆದಿರುವ ಮನೆಯಲ್ಲಿ ಪೊಲೀಸರು ಚಾಕುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನಿವೃತ್ತ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್ ಅವರು ಬಿಹಾರ ಮೂಲದವರು. 1981 ಬ್ಯಾಚ್ ಐಪಿಎಸ್ ಅಧಿಕಾರಿ ಆಗಿದ್ದರು. ತಮ್ಮ ಕರ್ತವ್ಯದಲ್ಲಿ ತುಂಬಾ ಚಾಣಕ್ಷರಾಗಿದ್ದ ಓಂ ಪ್ರಕಾಶ್ ಅವರು ಬೆಂಗಳೂರಿನ ಎರಡು ಭಯೋತ್ಪಾದಕ ಪ್ರಕರಣಗಳನ್ನು ತನಿಖೆ ಮಾಡಿದ್ದರು. 2013 ಏಪ್ರಿಲ್ 17ರಂದು ಮಲ್ಲೇಶ್ವರದ ಬಿಜೆಪಿ ಕಚೇರಿ ಬಳಿ ನಡೆದ ಸ್ಫೋಟ ಹಾಗೂ 2014 ಡಿಸೆಂಬರ್ 28 ರಂದು ಚರ್ಚ್ ಸ್ಟ್ರೀಟ್ನಲ್ಲಿ ನಡೆದ ಬ್ಲಾಸ್ಟ್ ಪ್ರಕರಣದಲ್ಲಿ ಶಂಕಿತ ಉಗ್ರರನ್ನ ಬಂಧಿಸಿದ್ದರು.
ಕೌಟುಂಬಿಕ ಕಲಹ ಹಿನ್ನೆಯಲ್ಲಿ ಈ ಕೃತ್ಯ ನಡೆದಿದೆ ಎಂದು ಹೇಳಲಾಗುತ್ತಿದೆ. ನಿವೃತ್ತ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್ ಅವರನ್ನ ಹೆಂಡತಿಯೇ ಬರ್ಬರವಾಗಿ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಓಂ ಪ್ರಕಾಶ್ ಪತ್ನಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದರು ಅನ್ನೋ ಮಾಹಿತಿ ಲಭ್ಯವಾಗಿದೆ.
What's Your Reaction?






