ಹಸು ಮಾರಾಟ ಮಾಡಿ RTI ದಾಖಲೆ ಪಡೆದ ರೈತ; 16 ಸಾವಿರ ಪುಟಗಳ ದಾಖಲೆಗೆ ₹32 ಸಾವಿರ ಪಾವತಿ!
ಗ್ರಾಮ ಪಂಚಾಯಿತಿಯ 15ನೇ ಹಣಕಾಸು ಯೋಜನೆ ಕಾರ್ಯಗಳಲ್ಲಿ ಅವ್ಯವಹಾರದ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ, RTI ನಡಿ ದಾಖಲೆ ಪಡೆಯಲು ರೈತನೊಬ್ಬ ಹಸು ಮಾರಾಟ ಮಾಡಿರುವ ಘಟನೆ ಹಾಸನ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಅಸಹಕಾರದ ನಡುವೆಯೂ ರೈತರ ಹೋರಾಟ ಹೇಗಿರಬೇಕು ಎಂಬುದಕ್ಕೆ ಬಸವನಹಳ್ಳಿ ಕೊಪ್ಪಲು ಗ್ರಾಮದ ಬಿ ಎಸ್ ರವಿ ನಿದರ್ಶನವಾಗಿದ್ದಾರೆ.
ಅರಕಲಗೂಡು ತಾಲೂಕಿನ ರಾಮನಾಥಪುರ ಹೋಬಳಿಯ ಕಾಳೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ 15ನೇ ಹಣಕಾಸಿನ ಯೋಜನೆಗಳ ದಾಖಲೆಗಳನ್ನು ಕೇಳಲು ರವಿ RTI ಅರ್ಜಿ ಹಾಕಿದ್ದರು. ಆದರೆ ದಾಖಲೆಗಳ ಪ್ರಮಾಣ ಅಚ್ಚರಿಗೊಳಿಸಿತ್ತು. ಒಟ್ಟು 16,000 ಪುಟಗಳು! ಪ್ರತಿಯೊಂದು ಪುಟಕ್ಕೆ ₹2 ಶುಲ್ಕ ನಿಗದಿಯಾಗಿರುವುದರಿಂದ, ₹32,000 ಪಾವತಿಸುವ ಅಗತ್ಯಬಿತ್ತು. ಆದರೂ ಹಿಂದೆ ಸರಿಯದ ರವಿ, ಹಾಲು ಕೊಡುತ್ತಿದ್ದ ತನ್ನ ಹಸುವನ್ನು ₹32,000ಕ್ಕೆ ಮಾರಾಟ ಮಾಡಿ, ಆ ಹಣವನ್ನು ಸಂಪೂರ್ಣ ದಾಖಲೆಯ ಶುಲ್ಕ ಪಾವತಿಸಲು ಮುಂದಾದರು. ಶುಲ್ಕ ಪಾವತಿಸಿದ ನಂತರ ದಾಖಲೆಗಳನ್ನು ಬಂಡಲ್ ಮಾಡಿ, ಎತ್ತಿನಗಾಡಿಯಲ್ಲಿ ತೆಗೆದುಕೊಂಡು ಹೋಗಿರುವ ದೃಶ್ಯ ಇದೀಗ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಪಿಡಿಒ “16,000 ಪುಟಗಳ ದಾಖಲೆಗಳಿವೆ” ಎಂದು ಹೇಳಿದ್ದರಿಂದ, ಅಸಹಾಯಕಗೊಂಡ ರವಿ ಮೇಲ್ಕಂಡ ನಿರ್ಧಾರ ಕೈಗೊಳ್ಳಬೇಕಾಯಿತು. ದಾಖಲೆ ಕೇಳಲು ಹೋದ ರವಿ ವಿರುದ್ಧ ಕೆಲವು ಗ್ರಾಮಸ್ಥರು ದೂರು ನೀಡಿದ ಘಟನೆ ಮತ್ತಷ್ಟು ವಿವಾದ ಸೃಷ್ಟಿಸಿತು. ಆದರೆ ಯಾವ ಅಡ್ಡಿಯನ್ನೂ ಲೆಕ್ಕಿಸದೇ ರವಿ ದಾಖಲೆಗಳನ್ನು ಪಡೆದುಕೊಂಡಿದ್ದಾರೆ.
ರವಿ ಹಸು ಮಾರಾಟ ಮಾಡಿ ದಾಖಲೆಗೆ ಹಣ ಪಾವತಿಸಿದ ಸುದ್ದಿ ಕೇಳಿ ಅಧಿಕಾರಿಗಳು ಬೆಚ್ಚಿದ್ದಾರೆ ಎನ್ನಲಾಗಿದೆ. ದಾಖಲೆ ಪತ್ರಗಳ ಪ್ರಮಾಣ ಮತ್ತು RTI ಶುಲ್ಕದ ಭಾರ ಗ್ರಾಮ ಪಂಚಾಯಿತಿ ಕಾರ್ಯನಿರ್ವಹಣೆಯ ಸ್ಪಷ್ಟ ಚಿತ್ರಣ ನೀಡುತ್ತದೆ ಎನ್ನುತ್ತಾರೆ ಸ್ಥಳೀಯರು. ರವಿ ಪಡೆದ ದಾಖಲೆಗಳು 15ನೇ ಹಣಕಾಸಿನ ಯೋಜನೆಗಳ ಕಾರ್ಯಗಳಲ್ಲಿ ನಡೆದಿರಬಹುದಾದ ಅವ್ಯವಹಾರಕ್ಕೆ ಸಂಬಂಧಿಸಿವೆ ಎಂಬ ಕಾರಣದಿಂದ, ಈಗ ಗ್ರಾಮಸ್ಥರು ಪೂರ್ಣ ತನಿಖೆ ನಡೆಸಲು ಆಗ್ರಹಿಸಿದ್ದಾರೆ.
What's Your Reaction?



