ಫೆ.27ರಿಂದ ಮಾ.3 ರವರೆಗೆ ವಿಧಾನ ಸೌಧದಲ್ಲಿ ಪುಸ್ತಕ ಮೇಳ – ಸಾಂಸ್ಕೃತಿಕ ಕಾರ್ಯಕ್ರಮ
ಮಂಗಳೂರು : ವಿಧಾನ ಸೌಧ ಆವರಣದಲ್ಲಿ ಪುಸ್ತಕ ಮೇಳ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಫೆ.27 ರಿಂದ ಮಾ.3 ರವರೆಗೆ ನಡೆಯಲಿದೆ ಎಂದು ವಿಧಾನ ಸಭಾ ಸ್ಪೀಕರ್ ಯು.ಟಿ. ಖಾದರ್ ಹೇಳಿದರು. ಅವರು ಇಂದು ನಗರದ ಸರ್ಕ್ಯೂಟ್‌ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಫೆ.27ರಂದು ಮಧ್ಯಾಹ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುಸ್ತಕ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಹಾಗೂ ವಿಧಾನ ಪರಿಷತ್‌ನ ಸ್ಪೀಕರ್ ಬಸವರಾಜ ಶಿವಲಿಂಗಪ್ಪ ಹೊರಟಿ ವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮವನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಜ್ಞಾನಪೀಠ ಪುರಸ್ಕೃತರಾದ ಡಾ. ಚಂದ್ರಶೇಖರ್ ಕಂಬಾರ ಹಾಗೂ ದಾಮೋದರ್ ಮೌಜೋ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿಧಾನ ಸಭಾ ವಿಪಕ್ಷ ನಾಯಕ ಆರ್. ಅಶೋಕ್, ಸಚಿವರುಗಳು, ಶಾಸಕರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈ ಮೇಳವು ಸಾರ್ವಜನಿಕರಿಗೆ ಉಚಿತವಾಗಿದ್ದು, ಪುಸ್ತಕ ಹಾಗೂ ಸಾಹಿತಿಗಳು, ಬರಹಗಾರರು, ಕವಿಗಳನ್ನು ವಿಧಾನಸೌಧದೆಡೆಗೆ ಕರೆತರುವ ಕೆಲಸವಾಗುತ್ತಿದ್ದು, ನೂತನವಾಗಿ ಪುಸ್ತಕವನ್ನು ಬಿಡುಗಡೆ ಮಾಡುವವರಿಗೂ ಇಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.
ಇಲ್ಲಿ ಪುಸ್ತಕ ಮಳಿಗೆಗಳಿಗೆ ಅವಕಾಶ ನೀಡಿದ್ದು, ಈಗಾಗಲೇ 250ಕ್ಕೂ ಹೆಚ್ಚು ಮಳಿಗೆಗಳಿಗೆ ಬೇಡಿಕೆ ಬಂದಿದ್ದು, 155 ಮಳಿಗೆಗಳಿಗೆ ಅವಕಾಶ ನೀಡಲಾಗುವುದು. ಒಬ್ಬರಿಗೆ ಒಂದು ಮಳಿಗೆ ಮಾತ್ರ ನೀಡಲಾಗುವುದು. ಇದರೊಂದಿಗೆ ಅಕಾಡೆಮಿಗಳಿಗೆ ಒಂದೊಂದು ಹಾಗೂ ಸರ್ಕಾರದ ಪುಸ್ತಕ ಮಳಿಗೆ ಮತ್ತು ನೂತನ ಬರಹಗಾಗರಿಗೆ ಒಟ್ಟಿಗೆ ಒಂದು ಮಳಿಗೆಯನ್ನು ನೀಡಲಾಗುವುದು ಎಂದು ತಿಳಿಸಿದರು.
ಪುಸ್ತಕ ಮೇಳದಲ್ಲಿ 14 ವಿಷಯಗಳ ಕುರಿತು ಸಂವಾದ ನಡೆಯಲಿದ್ದು, ಸಾಹಿತಿಗಳು, ವಿಧ್ವಂಶರು, ಹಿರೀಯ ವಕೀಲರು, ನ್ಯಾಯಾಧೀಶರು, ಪತ್ರಕರ್ತರು ಮೊದಲಾದವರು ಭಾಗವಹಿಸಿ ಸಂವಾದ ನಡೆಸಲಿದ್ದಾರೆ ಎಂದರು.
What's Your Reaction?






