ಬೀದಿ ನಾಟಕದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ- ಸುಧೀರ ಹಂಗಳೂರು
ಕರೂರು ಗ್ರಾಮದ ಸ್ವಾತಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ಬೀದಿ ನಾಟಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ತಾಲೂಕು ಕ್ಷೇತ್ರ ಯೋಜನಾಧಿಕಾರಿ ಸುಧೀರ್ ಹಂಗಳೂರು ಬೀದಿ ನಾಟಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಜ್ವಲಂತ ಕಾರ್ಯಕ್ರಮಗಳು, ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯ ಅರಿವು ಕಾರ್ಯಕ್ರಮ, ಮಹಿಳೆಯರ ಹಕ್ಕು ಮತ್ತು ಕಾನೂನು, ಸರಕಾರಿ ಯೋಜನೆಗಳು, ನಾನು ಓದಿದ ಪುಸ್ತಕ ವಿಮರ್ಶೆ,ಹೀಗೆ ಮಹಿಳೆಯರಿಗೆ ಅನೇಕ ಮಾಹಿತಿಯ ಕಣಜವನ್ನ ಒದಗಿಸುವಂತಹ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷರಾದ ಮಾತೃಶ್ರೀ ಡಾ. ಹೇಮಾವತಿ ಅಮ್ಮನವರ ಮಾರ್ಗದರ್ಶನದಲ್ಲಿ ಮಾಡುತ್ತಾ ಬರುತ್ತಿದೆ ಅದರೊಟ್ಟಿಗೆ ಈ ದಿನ ವಿಶೇಷವಾಗಿ ಸಾರ್ವಜನಿಕರಿಗೆ ಶೌಚಾಲಯ ರಚನೆ ಮತ್ತು ಬಳಕೆ, ಸಾರ್ವಜನಿಕ ಸ್ಥಳಗಳನ್ನು ಶುಚಿಯಾಗಿಟ್ಟುಕೊಳ್ಳುವಂಥದ್ದು, ಸಾರ್ವಜನಿಕ ಸ್ಥಳಗಳಾದ ಬಸ್ ಸ್ಟಾಂಡ್ , ದೇವಸ್ಥಾನ, ಶಾಲಾ ಆವರಣಗಳನ್ನು ಸ್ವಚ್ಚತೆಯಿಂದ ಇಟ್ಟುಕೊಳ್ಳುವದು, ನೀರಾವರಿ ವ್ಯವಸ್ಥೆಗಳಲ್ಲಿ ನೀರಿನ ಮಿತ ಬಳಕೆ ಮತ್ತು ಮುಂದಿನ ಪೀಳಿಗೆಗಾಗಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಈ ಕುರಿತು ಪ್ರಹಸನದ ಮೂಲಕ ಜನರಿಗೆ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ತಾಲೂಕಿಗೆ ಎರಡು ಕಾರ್ಯಕ್ರಮದಂತೆ ಇಡೀ ರಾಜ್ಯಾದ್ಯಂತ 500 ಕಾರ್ಯಕ್ರಮಗಳ ಆಯೋಜನೆಗೆ 25 ಲಕ್ಷ ರೂಪಾಯಿ ಅನುದಾನವನ್ನು ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿರುತ್ತಾರೆ ಎಂದರು.
ಯುವಜನ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಕೇಂದ್ರ ಹರ್ಲಾಪುರ, ಧಾರವಾಡ ಕಲಾ ತಂಡದವರಿಂದ ನೀರು ಉಳಿಸಿ ಅಭಿಯಾನದ ಬಗ್ಗೆ, ಪರಿಸರ ಸಂರಕ್ಷಣೆ ಬಗ್ಗೆ, ಸ್ವಚ್ಛತೆ ಬಗ್ಗೆ, ಶೌಚಾಲಯ ಬಳಕೆ ಬಗ್ಗೆ, ಬಾಲ್ಯ ವಿವಾಹ ನಿಷೇಧದ ಬಗ್ಗೆ ಹಾಗೂ ಯೋಜನೆಯ ವಿವಿಧ ಕಾರ್ಯಕ್ರಮಗಳ ಬಗ್ಗೆ ನಾಟಕ ಹಾಗೂ ಜಾಗೃತಿ ಗೀತೆಗಳ ಮೂಲಕ ಅರಿವು ಮೂಡಿಸಿದರು.
ಈ ಸಂದರ್ಭ ಕಲಾ ತಂಡದ ಮುಖ್ಯಸ್ಥರಾದ ಈಶ್ವರ, ಮುಖ್ಯೋಪಧ್ಯಾಯರಾದ ಮದ್ದಲೇಟಪ್ಪರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯ ಅಮರೇಶಗೌಡ, ಮುಖಂಡರಾದ ಪಂಪಾಪತಿ, ಜಗನ್ನಾಥರೆಡ್ಡಿ, ನೇತಾಜಿ ಶಾಲೆಯ ಶಿಕ್ಷಕರಾದ ಸೋಮಲಿಂಗಪ್ಪ, ಊರಿನ ಗಣ್ಯರು ಜ್ಞಾನವಿಕಾಸ ಸಮನ್ವಧಿಕಾರಿ ಪ್ರೀಯಾ, ವಲಯದ ಮೇಲ್ವಿಚಾರಕ ಹನಮಪ್ಪ, ಸೇವಾ ಪ್ರತಿನಿಧಿ ಲಕ್ಷ್ಮೀ , ಅನ್ನಪೂರ್ಣ, ರಾಜೇಶ್ವರಿ, ದೇವಿ ಸಾರ್ವಜನಿಕರು ಮತ್ತು ಶಾಲಾಮಕ್ಕಳು ಭಾಗವಹಿಸಿದ್ದರು.
ವರದಿ. ಶ್ರೀನಿವಾಸ ನಾಯ್ಕ
What's Your Reaction?






