ಸರ್ಕಾರ ಅಸ್ತಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಅಕ್ರಮವಾಗಿ ನೊಂದಣಿ|| ಅಧಿಕಾರಿಗಳ ಬಂಧನ

Jun 3, 2025 - 06:54
 0  102
ಸರ್ಕಾರ ಅಸ್ತಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಅಕ್ರಮವಾಗಿ ನೊಂದಣಿ|| ಅಧಿಕಾರಿಗಳ ಬಂಧನ
ಸರ್ಕಾರ ಅಸ್ತಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಅಕ್ರಮವಾಗಿ ನೊಂದಣಿ|| ಅಧಿಕಾರಿಗಳ ಬಂಧನ

ಯಾದಗಿರಿ: ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ

ಸರ್ಕಾರ ಅಸ್ತಿಯನ್ನು ಬೇರೆಯವರಿಗೆ ಅನಧಿಕೃತವಾಗಿ ಮತ್ತು ಅಕ್ರಮವಾಗಿ ನೊಂದಣಿ ಮಾಡಿಕೊಟ್ಟು ದಾಖಲೆಗಳನ್ನು ನಾಶಪಡಿಸಲು ಮುಂದಾಗಿದ್ದ ಇಲ್ಲಿನ ನಗರಸಭೆ ಇಬ್ಬರು ಹಾಗೂ ಶಹಾಪುರ ನಗರಸಭೆ ಓರ್ವ ಸಿಬ್ಬಂದಿಯನ್ನು ಬಂಧಿಸಿ, ಪ್ರಕರಣ ದಾಖಲಿಸಿದ ಘಟನೆ ಸೋಮವಾರ (ಜೂ.02) ನಡೆದಿದೆ.

ನಗರಸಭೆಯ ಕಂದಾಯ ನಿರೀಕ್ಷಕ ಮಾನಪ್ಪ ಬಡಿಗೇ‌ರ್, ಪ್ರಭಾರಿ ಆ‌ರ್.ಐ.ಆಗಿರುವ ಮೈನೋದ್ದೀನ್ ಮೊಹ್ಮದ್ ಹಜರತ್ ಹಾಗೂ ಶಹಾಪುರ ನಗರಸಭೆಯಲ್ಲಿ ನೀರು ಸರಬರಾಜು ವಿಭಾಗದ ಮೇಲ್ವಿಚಾರಕರಾಗಿರುವ ಹಣಮಂತಪ್ಪ ಆಶನಾಳ ಎಂಬುವವರು ಬಂಧಿತ ಆರೋಪಿಗಳಾಗಿದ್ದಾರೆ

ಯಾದಗಿರಿ ಸೀಮಾಂತರದ ಸರ್ವೆ ನಂ. 151 ರಲ್ಲಿನ ನಿವೇಶನ ಸಂಖ್ಯೆ 42ನ್ನು ಮಲ್ಲಮ್ಮ ರಾಮಣ್ಣ ಎಂಬುವವರ ಹೆಸರಿಗೆ ಮಾಡಿಕೊಟ್ಟಿದ್ದ ಈ ಮೂವರು, ರಜೆ ದಿನವಾದ ಭಾನುವಾರ ಸಂಜೆ 4ರ ಸುಮಾರಿಗೆ ನಗರಸಭೆ ಕಚೇರಿಗೆ ಬಂದು, ಅಲ್ಲಿದ್ದ ಕಾವಲುಗಾರ ತಿಪ್ಪಣ್ಣ ಎಂಬುವವನಿಗೆ ಬೆದರಿಸಿ ಕಚೇರಿ ಬೀಗ ತೆಗೆದುಕೊಂಡು ಕೋಣೆಗಳಿಗೆ ಹೋಗಿ ಹಲವಾರು ಕಡತಗಳನ್ನು ಪರಿಶೀಲಿಸಿ ಅಕ್ರಮ ಎಸಗಿದ್ದು ಸಿಸಿ ಟಿವಿ ಮೂಲಕ ಕಂಡು ಬಂದಿದೆ ಮತ್ತು ಈ ವೇಳೆ ಓರ್ವ ಸಾರ್ವಜನಿಕ ವ್ಯಕ್ತಿ ಅಲ್ಲಿರುವುದು ಕಾಣಿಸಿದೆ ಎಂದು ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ, ನಗರ ಪೊಲೀಸ್‌ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಹೇಳಿದ್ದಾರೆ.

ಮಲ್ಲಮ್ಮ ಎಂಬುವವರಿಗೆ ನಿವೇಶನ ಅಕ್ರಮವಾಗಿ ನೊಂದಣಿ ಮಾಡಿಕೊಟ್ಟ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಚಾರಣೆ ನಡೆದು ಇದಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆದೇಶವಾಗಿದೆ.

ಈ ವಿಷಯ ತಿಳಿದ ಶಹಾಪುರ ನಗರಸಭೆ ಸಿಬ್ಬಂದಿ ಹಣಮಂತ ಇಲ್ಲಿನ ನಗರಸಭೆ ಸಿಬ್ಬಂದಿ ಮಾನಪ್ಪ ಮತ್ತು ಮೈನೋದ್ದಿನ್ ಎಂಬುವವರೊಂದಿಗೆ ರಜೆ ದಿನವಾದ ಭಾನುವಾರ ಅಕ್ರಮವಾಗಿ ನಗರಸಭೆ ಕಚೇರಿಗೆ ನುಗ್ಗಿ ಅಲ್ಲಿನ ದಾಖಲೆಗಳನ್ನು ಮರೆಮಾಚಿ ನಾಶಪಡಿಸುವ ಹುನ್ನಾರಕ್ಕೆ ಮುಂದಾಗಿದ್ದಾರೆಂದು ಪೌರಾಯುಕ್ತ ಚವ್ಹಾಣ ದೂರಿನಲ್ಲಿ ವಿವರಿಸಿದ್ದಾರೆ.

ಆ ರೀತಿಯಾಗಿ ಸರ್ಕಾರಕ್ಕೂ ಮತ್ತು ಇಲಾಖೆಗೂ ಮೋಸ ಮಾಡಿರುವ ಇರುವ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ದೂರಿನ್ವಯ ಮೂವರನ್ನು ಬಂಧಿಸಿದ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

What's Your Reaction?

like

dislike

love

funny

angry

sad

wow