ಎಂಟೆತ್ತಿನ ಮ್ಯಾಲೊಂದು ಕುಂಟೆತ್ತು ಬಂದಾದ ಜ್ವಾಳ ನೀಡ್ರಮ್ಮೋ,,,,,,
ಕರುನಾಡು ವೈವಿದ್ಯಮಯ ಆಚರಣೆಗಳ ಬೀಡು,ಇಲ್ಲಿ ಕಲ್ಲು ,ಮಣ್ಣು,ಕಗ,ಮೃಗಗಳಿಗೂ ವಿಶೇಷ ಪ್ರಾಧಾನ್ಯತೆಯಿದೆ. ಈ ಆಚರಣೆಗಳ ಮೂಲಕ ರೈತರಿಗೂ ಎತ್ತುಗಳಿಗೂ ಇರುವ ಭಾವನಾತ್ಮಕ ಸಂಬಂಧ,ಪ್ರೀತಿ ವಾತ್ಸಲ್ಯ ಎಂತಹದು ಎಂಬುದು ತಿಳಿಯುತ್ತದೆ. ಎಲ್ಲದರಲ್ಲೂ ಭಾವನಾತ್ಮಕ ಸಂಬಂಧ,ಸ್ನೇಹದ ಸೆಳೆತ ಇದ್ದದ್ದೇ. ಅದರ ಪ್ರತೀಕವೆಂಬಂತೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಬಳಗಾನೂರು ಪಟ್ಟಣದ ಐದನೇವಾರ್ಡಿನ ರೈತಮಕ್ಕಳು ಓಣಿಯಲ್ಲಿ ಮಣ್ಣೆತ್ತಿನ ಅಮವಾಸೆಯ ನಿಮಿತ್ಯ ಮಣ್ಣಿನಿಂದ ಮಾಡಿದ ಎತ್ತುಗಳನ್ನು ತಂದು ಜಗುಲಿಯ ಮುಂದಿಟ್ಟು ಜೋಳದ ಹಿಟ್ಟಿನ ದೋಸೆ,ಬೆಲ್ಲಕ್ಕಿ ಬೇಳೆಯ ನೈವೇಧ್ಯ ಮಾಡಿ ಮಳೆ ಬೆಳೆ ಚನ್ನಾಗಿರಲೆಂದು ಬೇಡಿಕೊಂಡು, ಸಂಜೆ ಓಣಿಯ ಎಲ್ಲಾ ಮನೆಗಳ ಮಣ್ಣೆತ್ತುಗಳನ್ನು ಬಾವಿಕಟ್ಟೆಯ ಮೇಲಿಟ್ಟು ಸಾಮೂಹಿಕವಾಗಿ ಪೂಜೆಮಾಡಿ ಸೇರಿದ ಮಕ್ಕಳಿಗೆ ಹಿರಿಯರಿಗೆ ಪ್ರಸಾದ ನೀಡುವ ಪ್ರತೀತಿ ಪ್ರತಿವರ್ಷ ಸಾಗುತ್ತ ಬಂದಿದೆ. ಸಾಮೂಹಿಕ ಪೂಜೆಯ ನಂತರ ಮಕ್ಕಳು ತಮ್ಮ ತಮ್ಮ ಮಣ್ಣೆತ್ತುಗಳನ್ನು ತೆಗೆದುಕೊಂಡು ಕೊರಳಲ್ಲಿ ಎತ್ತುಗಳಿಗೆ ಹಾಕುವ ಗೆಜ್ಜೆ ಸರವನ್ನು ಹಾಕಿಕೊಂಡು ತಾ ಮುಂದು ನಾ ಮುಂದು ಎಂದು ಓಡುವ ಪದ್ದತಿ ಇದೆ. ಮರುದಿನ ಎಂಟೆತ್ತಿನ ಮೇಲೊಂದು ಕುಂಟೆತ್ತು ಬಂದಾದ ಜೋಳ ನೀಡ್ರಮ್ಮೋ ಅಂತ ಓಣಿಗಳ ಮನೆಗಳಿಗೆ ಹೋಗಿ ಹಣ ಜೋಳ ಸಂಗ್ರಹಿಸಿಕೊಂಡುಬರುವ ಹಳೆಯ ಪದ್ದತಿ ಇನ್ನೂ ಜೀವಂತವಾಗಿದ್ದು ನಮ್ಮ ಹಿರಿಯರು ಹಾಕಿಕೊಟ್ಟ ಪರಂಪರೆಯ ದ್ಯೂತಕವೆಂಬಂತೆ ಪ್ರಚಲಿತದಲ್ಲಿದೆ. ಈ ಸಂದರ್ಭದಲ್ಲಿ ಎತ್ತುಗಳ ಸಾಮೂಹಿಕ ಪೂಜೆಯನ್ನು ಮೇಲುಶಂಕರಲಿಂಗ ದೇವಸ್ಥಾನದ ಪಕ್ಕದಲ್ಲಿರುವ ಬಾವಿಯ ಕಟ್ಟೆಯ ಮೇಲೆ ಓಣಿಯ ಸಾರ್ವಜನಿಕರ ನೂರಾರು ಮಣ್ಣೆತ್ತುಗಳನ್ನು ಇಟ್ಟು, ಶರಣಮ್ಮ ಹೊಸಳ್ಳಿಯವರು ಪೂಜೆಮಾಡಿದರು. ಈ ವೇಳೆ ಓಣಿಯ ಮಕ್ಕಳು ನಿವಾಸಿಗಳು ಇದ್ದರು. ವರದಿ,,, ಸುರೇಶ ಬಳಗಾನೂರು
What's Your Reaction?






