ಮಸ್ಕಿ ತಾಲೂಕಾಗಿ 8 ವರ್ಷಗಳ ನಂತರ ಮಸ್ಕಿ ಸ್ಥಳೀಯ ಯೋಜನಾ ಪ್ರಾಧಿಕಾರ ರಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಮಸ್ಕಿ ಪುರಸಭೆ ವ್ಯಾಪ್ತಿ ಪ್ರದೇಶ ಸೇರಿ ತಾಲೂಕಿನ ಸಾನಬಾಳ, ಹೀರೆಕಡಬೂರು, ಚಿಕ್ಕಕಡಬೂರು, ಸಂಕನೂರು, ಗುಡುದೂರು, ಪರಾಪುರು, ನಾಗರಬೆಂಚಿ, ಹಿರೇಅಂತರಗಂಗಿ ವೆಂಕಟಾಪುರು ಮತ್ತು ಮುದಬಾಳ ಗ್ರಾಮಗಳು ಮಸ್ಕಿ ಸ್ಥಳೀಯ ಯೋಜನಾ ಪ್ರಾಧಿಕಾರ ವ್ಯಾಪ್ತಿಗೆ ಸರಹದ್ದು ನಿಗಧಿಪಡಿಸಲಾಗಿದೆ.

Oct 27, 2025 - 07:49
Oct 27, 2025 - 07:50
 0  33

ಮಸ್ಕಿ

ಹೊಸದಾಗಿ ತಾಲೂಕುಗಳಾಗಿ ಘೋಷಣೆಯಾದ ಅನೇಕ ತಾಲೂಕು ಕೇಂದ್ರಗಳಿಗೆ ಸ್ಥಳೀಯ ಯೋಜನಾ ಪ್ರಾಧಿಕಾರ ರಚನೆ ಬಾಕಿ ಉಳಿದಿದ್ದವು. 2017 ರಲ್ಲಿ ಮಸ್ಕಿ ತಾಲೂಕು ಕೇಂದ್ರವಾಗಿ ಘೋಷಿಸಲಾಗಿತ್ತು. 2018 ಜನವರಿಯಿಂದ ಮಸ್ಕಿ ತಾಲೂಕು ಕೇಂದ್ರವಾಗಿಕಾರ್ಯಾರಂಭ ಮಾಡಿತ್ತು. ಅಲ್ಲಿಂದ ಇಲ್ಲಿಯವರಗೆ ನಗರ ಯೋಜನಾ ಪ್ರಾಧಿಕಾರ ರಚನೆಯಾಗದೇ ಇರುವರಿಂದ ಲಿಂಗಸೂಗೂರು ತಾಲೂಕಿನ ವ್ಯಾಪ್ತಿಯಲ್ಲಿ ಸಾರ್ವಜನಿಕರು ಸೇವೆ ಪಡೆಯುವಂತಾಗಿತ್ತು.

ಪ್ರತ್ಯೇಕವಾಗಿ ಮಸ್ಕಿ ಯೋಜನಾ ಪ್ರಾಧಿಕಾರಕ್ಕೆ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಅಧಿಸೂಚನೆ ಪ್ರಕಟಿಸಿ ಯೋಜನಾ ಪ್ರಾಧಿಕಾರ ಸಮಿತಿ ರಚಿಸಬೇಕಿರುವುದು ಬಾಕಿಯಿದೆ. ಅಲ್ಲಿಯವರಗೆ ಮಾನವಿ ಯೋಜನಾ ಪ್ರಾಧಿಕಾರದೊಂದಿಗೆ ಅನುಮೋದಿತ ವಲಯಗಳೊಂದಿಗೆ ನಿಯಮಗಳನ್ನು ಅಳವಡಿಸಿಕೊಳ್ಳಲು ಸೂಚಿಸಲಾಗಿದೆ.

ಮಹಾಯೋಜನೆ :

ಪ್ರತ್ಯೇಕವಾಗಿ ಅಸ್ತಿತ್ವಕ್ಕೆ ಬಂದಿರುವ ಮಸ್ಕಿ ಸ್ಥಳೀಯ ಯೋಜನಾಧಿಕಾರಕ್ಕೆ ಅಧ್ಯಕ್ಷರು ಹಾಗೂ ಇತರೆ ಸಮಿತಿ ಸದಸ್ಯರುಗಳನ್ನು ರಚಿಸುವುದು ಬಾಕಿಯಿದೆ. ಸಮಿತಿ ಪೂರ್ಣ ರಚನೆಯ ನಂತರ ಮಹಾಯೋಜನೆ(ಮಾಸ್ಟರ್ ಪ್ಲಾನ್) ರಚಿಸಿ ಅನುಮೋದನೆ ನಂತರವಷ್ಟೇ ಪೂರ್ಣಪ್ರಮಾಣದಲ್ಲಿ ಕಚೇರಿ ಅಸ್ತಿತ್ವಕ್ಕೆ ಬರಲಿದೆ.

ಯೋಜನಾ ಪ್ರಾಧಿಕಾರ ಕಾರ್ಯದರ್ಶಿಯಾಗಿ ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕ ಕಾರ್ಯದರ್ಶಿಯಾಗಿ, ಮಸ್ಕಿ ಪುರಸಭೆ ಮುಖ್ಯಾಧಿಕಾರಿ ಮತ್ತು ಒಬ್ಬ ಪುರಸಭೆ ಸದಸ್ಯ ಸದಸ್ಯರುಗಳಾಗಿ ಕಾರ್ಯನಿರ್ವಹಿಸಬೇಕಿದ್ದು, ಮೂರು ಜನ ಇತರೆ ಸದಸ್ಯರು ಹಾಗೂ ಅಧ್ಯಕ್ಷರನ್ನು ನಗರಾಭಿವೃದ್ಧಿ ಇಲಾಖೆ ನೇಮಿಸಬೇಕಿದೆ.

ಹೊಸ ತಾಲೂಕು ಕೇಂದ್ರವಾಗಿ ಘೋಷಣೆಯಾದಾಗಿನಿಂದ ಅನೇಕ ಪ್ರಗತಿ ಕಾರ್ಯಗಳು ನೆನೆಗುದಿಗೆ ಬಿದ್ದಿವೆ. ತಾಲೂಕು ಆಡಳಿತ ಸೌಧದಿಂದ ಹಿಡಿದು ನ್ಯಾಯಾಲಯ, ಎಲ್ಲ ಕಚೇರಿಗಳ ಪ್ರಾರಂಭವಾಗದೇ ಹೋಗಿರುವಾಗ ಸ್ಥಳೀಯ ಯೋಜನಾ ಪ್ರಾಧಿಕಾರ ಮಂಜೂರಾತಿ ದೊರೆಕಿದ್ದು, ಕಾರ್ಯಾರಂಭ ವೇಗ ಪಡೆಯಬೇಕಿದೆ.

What's Your Reaction?

like

dislike

love

funny

angry

sad

wow