ಕರ್ನಾಟಕ ಪೊಲೀಸರಿಗೊಂದು ಹೊಸ ನೀಲಿ ಪೀಕ್ ಕ್ಯಾಪ್ : ಇತಿಹಾಸದ ಪುಟ ಸೇರಿದ ಹಳೆ ಖಾಕಿ ಕ್ಯಾಂಪ್
ಬೆಂಗಳೂರು, ಅ.28: ಕರ್ನಾಟಕ ರಾಜ್ಯ ಮಾದಕ ವಸ್ತು ಮುಕ್ತವಾಗಬೇಕು. ಇದು ಕೇವಲ ನನ್ನ ಗುರಿ ಮಾತ್ರವಲ್ಲದೇ ಪೊಲೀಸರ ಗುರಿಯೂ ಆಗಿದ್ದು, ಸಾಧಿಸಿ ತೋರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಪೊಲೀಸ್ ಸಿಬ್ಬಂದಿ ಪೀಕ್ ಕ್ಯಾಪ್ ಪರಿಚಯ ಮತ್ತು ವಿತರಣೆ ಹಾಗೂ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ ಉದ್ಘಾಟನೆ ಮತ್ತು 'ಸನ್ನಿತ್ರ ಬಿಡುಗಡೆ' ಸಮಾರಂಭದಲ್ಲಿ ಅವರು ಮಾತನಾಡಿದರು. ನಮ್ಮ ಯುವ ಶಕ್ತಿ, ವಿದ್ಯಾರ್ಥಿ ಯುವಜನರ ಚೈತನ್ಯ ಮತ್ತು ಸಾಮರ್ಥ್ಯ ಮಾದಕ ವಸ್ತುಗಳಿಂದ ಬಲಿ ಆಗಬಾರದು. ಇದಕ್ಕೆ ಪೊಲೀಸ್ ಇಲಾಖೆ ಗುರಿ ಇಟ್ಟುಕೊಂಡು ಮಾದಕ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಆಗ ಇಡೀ ಕರ್ನಾಟಕ ಜನತೆ ಪೊಲೀಸ್ ಇಲಾಖೆಗೆ ಕೃತಜ್ಞತೆ ಸಲ್ಲಿಸುತ್ತಾರೆ ಎಂದು ಹೇಳಿದರು.ಕೆಲವು ಪೊಲೀಸರು ರಿಯಲ್ ಎಸ್ಟೇಟ್ ಮಾಡುವವರ ಜೊತೆ, ಮಾದಕ ವಸ್ತು ಮಾರಾಟ ಜಾಲದ ಜೊತೆ ಶಾಮೀಲಾಗಿರುವ ಆರೋಪಗಳಿವೆ. ಆದರೆ, ರೌಡಿ ಗಳನ್ನು ಮೊಳಕೆಯಲ್ಲೆ ಚಿವುಟಿ ಹಾಕುವುದು ನಿಮ್ಮಿಂದ ಸಾಧ್ಯವಿದೆ. ಪೊಲೀಸರ ಬಗ್ಗೆ ಅಪರಾಧ ಜಗತ್ತಿಗೆ ಭಯ ಕಡಿಮೆಯಾಗಿದೆ. ಏಕೆ ಹೀಗಾಯಿತು ಎಂದು ನಿಮ್ಮನ್ನು ನೀವೇ ಪ್ರಶ್ನಿಸಿಕೊಂಡರೆ ಉತ್ತರ ನಿಮಗೇ ಗೊತ್ತಿರುತ್ತದೆ ಎಂದು ನುಡಿದರು.
ಗೃ
ಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಪೊಲೀಸ್ ಟೋಪಿ ಬದಲಾವಣೆ ಮಾಡುವಂತೆ ಅನೇಕ ಬಾರಿ ಬೇಡಿಕೆಗಳು ಬಂದಿವೆ. ಮಳೆ ಬಂದಾಗ ಹೆಚ್ಚು ತೂಕವಾಗುತ್ತದೆ ಸೇರಿದಂತೆ ಅನೇಕ ದೂರುಗಳು ಇದ್ದವು. 2015ರಲ್ಲಿ ನಾನು ಗೃಹ ಸಚಿವನಾಗಿದ್ದಾಗಲೂ ಬದಲಾವಣೆಯ ಪ್ರಸ್ತಾವ ಬಂದಿತ್ತು. ಅನೇಕ ಕಾರಣಗಳಿಂದ ಸಾಧ್ಯವಾಗಲಿಲ್ಲ. ಈ ಬಾರಿ ಪ್ರಸ್ತಾವ ಬಂದಾಗ ಚರ್ಚೆ ಮಾಡಿದಾಗ, ಇಲಾಖೆಯ ಹಿರಿಯ ಅಧಿಕಾರಿಗಳು, ಬೇರೆ ರಾಜ್ಯಗಳಲ್ಲಿ ಯಾವ ರೀತಿಯ ಕ್ಯಾಪ್ ಧರಿಸುತ್ತಾರೆ ಎಂಬ ಮಾಹಿತಿ ತರಿಸಿಕೊಂಡು ಕ್ಯಾಪ್‌ಗಳನ್ನು ಪ್ರದರ್ಶನ ಮಾಡಿದರು. ಮುಖ್ಯಮಂತ್ರಿ ಅವರು ನೀಲಿ ಬಣ್ಣದ ಕ್ಯಾಪ್ ಆಯ್ಕೆ ಮಾಡಿದರು. ಇಲಾಖೆಯ ಪರವಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಪೊಲೀಸ್ ಇಲಾಖೆಗೆ ಇಂದು ಐತಿಹಾಸಿಕ ದಿನ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ, ಶಾಸಕರಾದ ರಿಝಾನ್ ಆರ್ಶದ್, ಅಶೋಕ್ ಪಟ್ಟಣ, ಪ್ರಮುಖರಿದ್ದರು.
What's Your Reaction?



