ಎಸ್ ಎಫ್ ಐ ನೇತೃತ್ವದಲ್ಲಿ ವಿದ್ಯಾರ್ಥಿಗಳಿಂದ ಶಾಸಕ ಮಾನಪ್ಪ ವಜ್ಜಲ್ ಶವಯಾತ್ರೆ

Jul 26, 2025 - 08:08
 0  13
ಎಸ್ ಎಫ್ ಐ ನೇತೃತ್ವದಲ್ಲಿ ವಿದ್ಯಾರ್ಥಿಗಳಿಂದ ಶಾಸಕ ಮಾನಪ್ಪ ವಜ್ಜಲ್ ಶವಯಾತ್ರೆ

ಲಿಂಗಸ್ಗೂರು : ಹಟ್ಟಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮಂಜೂರಿಗಾಗಿ ಆಗ್ರಹಿಸಿ ಕಾಲೇಜು ವಿದ್ಯಾರ್ಥಿಗಳು ಎಸ್ ಎಫ್ ಐ ಸಂಘಟನೆ ನೇತೃತ್ವದಲ್ಲಿ ಲಿಂಗಸೂಗೂರು ಶಾಸಕ ಮಾನಪ್ಪ ವಜ್ಜಲ್ ವಿರುದ್ಧ ಅಣಕು ಶವಯಾತ್ರೆ ನಡೆಸಿ ಪ್ರತಿಭಟಿಸಿದರು.

ಪಟ್ಟಣದ ಕ್ಯಾಂಪ್ ಬಸ್ ನಿಲ್ದಾಣ, ಕೋಠಾ ಕ್ರಾಸ್ ಮೂಲಕ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಪ್ರತಿಭಟನಾಕಾರರು, ಶಾಸಕರ ಪ್ರತಿಕೃತಿ ಚಟ್ಟ (ಮಂಟಪ) ಹೆಗಲ ಮೇಲೆ ಹೊತ್ತುಕೊಂಡು ಬೀದಿಯುದ್ದಕ್ಕೂ ಘೋಷಣೆ ಕೂಗಿ ಹಳೆ ಬಸ್ ನಿಲ್ದಾಣದಲ್ಲಿ ಶವವನ್ನು ಸುಟ್ಟು ಆಗ್ರಹಿಸಿದರು.

ಶಾಲಾ ಆವರಣದಲ್ಲೇ ಧರಣಿ ಮುಂದುವರೆದಿದ್ದು ಧರಣಿಗೆ ಮೂರು ದಿನ ಕಳೆದರೂ ಶಾಸಕರು ಸ್ಥಳಕ್ಕೆ ಬಾರದಿರುವುದರಿಂದ ಕಾಲೇಜಿನ ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನಮ್ಮ ಹಕ್ಕುಗಳಿಗಾಗಿ ನಾವು ಶಾಂತಿಯುತ ಧರಣಿ ನಡೆಸುತ್ತಿದ್ದರೂ, ಶಾಸಕರು ಎಡವಟ್ಟಾಗಿ ನಮ್ಮ ಧ್ವನಿಗೆ ಸ್ಪಂದಿಸಿಲ್ಲ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಕಾಲೇಜುಗಳಲ್ಲಿ ಶೌಚಾಲಯ, ಕುಡಿಯುವ ನೀರು, ಗ್ರಂಥಾಲಯ ಹಾಗೂ ಪ್ರಯೋಗಾಲಯದಂತಹ ಮೂಲಭೂತ ಸೌಕರ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಹರಸಾಹಸಪಟ್ಟು ಓದಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ವಿದ್ಯಾರ್ಥಿಗಳು ಹಾಗೂ ಪೋಷಕರು ಸಭೆ ನಡೆಸಿ, ಶಾಸಕರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು.

ಏಷ್ಯಾ ಖಂಡದಲ್ಲಿಯೇ ಪ್ರಸಿದ್ಧ ಹಟ್ಟಿ ಚಿನ್ನದ ಗಣಿ ಪಟ್ಟಣವಾಗಿರುವ ಹಟ್ಟಿಯಲ್ಲಿ ಇಂದುವೂ ತಾಂತ್ರಿಕ ಶಿಕ್ಷಣಕ್ಕೆ ಅಗತ್ಯವಿರುವ ಡಿಪ್ಲೋಮಾ ಅಥವಾ ಇಂಜಿನಿಯರಿಂಗ್ ಕಾಲೇಜುಗಳಿಲ್ಲ ಎಂಬುದು ದುರಂತದ ಸಂಗತಿಯಾಗಿದೆ. ಹಟ್ಟಿ ಚಿನ್ನದ ಗಣಿಯಲ್ಲಿ ಸುಮಾರು ಐದು ಸಾವಿರಕ್ಕಿಂತ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಪರಿಣಾಮವಾಗಿ ಸ್ಥಳೀಯ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕಾಗಿ ಬೇರೆ ಬೇರೆ ಜಿಲ್ಲೆಗೆ ಹೋಗಿ ಶಿಕ್ಷಣ ಪಡೆಯುವಂತಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಕಾಲೇಜು ಮಂಜೂರು ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹಟ್ಟಿ ವೇದಿಕೆ ವತಿಯಿಂದ ಹಟ್ಟಿ ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಎಸ್ ಎಫ್ ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು , ತಾಲೂಕಾಧ್ಯಕ್ಷ ಗೋವಿಂದ, ಕಟ್ಟಡ ಕಾರ್ಮಿಕ ತಾಲೂಕಾಧ್ಯಕ್ಷ  ನಿಂಗಪ್ಪ ವೀರಾಪುರ, ಚನ್ನಬಸವ, ವನಜಾಕ್ಷಿ,ಯಲ್ಲಪ್ಪ ಪ್ಯಾಟೆಗೌಡ್ರು, ವಿನೋದ ಕುಮಾರ, ಸಾಹೇರಬಾನು, ಗಾಯಿತ್ರಿ , ದುರ್ಗಮ್ಮ,ದಾವುದ್, ನಜೀರ್, ಎಂ ಮಹಾಂತೇಶ ,ನರಸಮ್ಮ, ಇಮ್ರಾನ್,ರಿಯಾಜ್, ರೂಪಾ, ತನುಶ್ರೀ, ತಬುಸುಮ್, ರೇಣುಕಾ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಇನ್ನಿತರರು ಇದ್ದರು.

What's Your Reaction?

like

dislike

love

funny

angry

sad

wow