ದೇವನಾಂಪ್ರಿಯ ಅಶೋಕ ಸರಕಾರಿ ಮಹಾವಿದ್ಯಾಲಯದಲ್ಲಿ,ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆ || ಡಾ.ಮಹಾಂತಗೌಡ ಪಾಟೀಲ್
ಮಸ್ಕಿ : ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ದ್ವಿತೀಯ ವರ್ಷದ ಪಿಯುಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಗಳ ಪುನರವಲೋಕನವನ್ನು ಸುಗಮಗೊಳಿಸುವ ಉದ್ದೇಶದ ಜೊತೆಗೆ,ವಿದ್ಯಾರ್ಥಿಗಳಲ್ಲಿ ಪಠ್ಯಾಧಾರಿತ ಅರಿವು,ಸಾಮಾನ್ಯ ಜ್ಞಾನ ಹಾಗೂ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುವ ಸಲುವಾಗಿ ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆಯನ್ನು ದಿನಾಂಕ 10-02-2026 ರಂದು ಬೆಳಿಗ್ಗೆ 10.00 ಗಂಟೆಗೆ ನಮ್ಮ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಮಹಾಂತಗೌಡ ಪಾಟೀಲ್ ಅವರು ತಿಳಿಸಿದ್ದಾರೆ.
ಈ ರಸಪ್ರಶ್ನೆ ಸ್ಪರ್ಧೆಯು ಮಸ್ಕಿ ತಾಲೂಕಿನ ಎಲ್ಲಾ ದ್ವಿತೀಯ ವರ್ಷದ ಪಿಯುಸಿ ವಿದ್ಯಾರ್ಥಿಗಳಿಗೆ ಮುಕ್ತವಾಗಿದ್ದು,ವಿದ್ಯಾರ್ಥಿಗಳಲ್ಲಿ ಪರೀಕ್ಷೆಗೆ ಸಂಬಂಧಿಸಿದ ಆತ್ಮವಿಶ್ವಾಸ ಹಾಗೂ ಮನೋಸ್ಥೈರ್ಯವನ್ನು ಹೆಚ್ಚಿಸುವ ಹಿನ್ನೆಲೆಯಿಂದ ಪ್ರತಿ ಕಾಲೇಜಿನಿಂದ ಭಾಗವಹಿಸುವ ವಿದ್ಯಾರ್ಥಿಗಳ ಸಂಖ್ಯೆಗೆ ಯಾವುದೇ ಮಿತಿಯನ್ನು ವಿಧಿಸಲಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.ಸ್ಪರ್ಧೆಯಲ್ಲಿ ದ್ವಿತೀಯ ವರ್ಷದ ಪಿಯುಸಿ ಪಠ್ಯಕ್ರಮಕ್ಕೆ ಸಂಬಂಧಿಸಿದ ಪ್ರಶ್ನೆಗಳು ಕೇಳಲಾಗುತ್ತವೆ.ಆರಂಭಿಕ ಹಂತದಲ್ಲಿ ಪ್ರತಿ ಕಾಲೇಜಿನಿಂದ ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಲಿಖಿತ ಪರೀಕ್ಷೆಯ ಮೂಲಕ ಸ್ಪರ್ಧೆಯನ್ನು ಆಯೋಜಿಸಲಾಗುವುದು.ಅಲ್ಲಿ ಒಟ್ಟು 30 ವಸ್ತುನಿಷ್ಠ ಪ್ರಶ್ನೆಗಳಿಗೆ 30 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ.ಮುಂದಿನ ಹಂತದಲ್ಲಿ ತಂಡಗಳ ನಡುವೆ ನಡೆಸಲಾಗುವ ಮೌಖಿಕ ರಸಪ್ರಶ್ನೆ ಸ್ಪರ್ಧೆಯಲ್ಲಿ ಹೆಚ್ಚು ಅಂಕ ಗಳಿಸಿದ ತಂಡಗಳಿಗೆ ನಗದು ಬಹುಮಾನಗಳನ್ನು ಪ್ರಧಾನ ಮಾಡಲಾಗುವುದು ಎಂದು ರಸಪ್ರಶ್ನೆಯ ವಿಧಾನ ಹಾಗೂ ನಿಯಮಗಳನ್ನು ವಿವರಿಸಿದರು.
ಅಲ್ಲದೆ,ಮಸ್ಕಿ ತಾಲೂಕಿನ ಸಮಸ್ತ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಈ ಶೈಕ್ಷಣಿಕವಾಗಿ ಉಪಯುಕ್ತ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂಬ ಉದ್ದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಜೊತೆಗೆ,ತಾಲೂಕಿನ ಎಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು ತಮ್ಮ ವಿದ್ಯಾರ್ಥಿಗಳನ್ನು ಈ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕಾಗಿ ಮನವಿ ಮಾಡಿದರು
What's Your Reaction?



