ಸ್ಥಳೀಯ ಪತ್ರಕರ್ತರ ಕಾರ್ಯಕ್ಷಮತೆಯೂ ಹೆಚ್ಚಾಗಲಿ: ಜಿಲ್ಲಾಧಿಕಾರಿ ಸಲಹೆ
ಭಾರತ ಸರ್ಕಾರದ ವಾರ್ತಾಶಾಖೆಯಿಂದ ವಾರ್ತಾಲಾಪ ಕಾರ್ಯಾಗಾರ
ವರದಿಗಾರಿಕೆ, ಸಂಪಾದಕೀಯ ಬರೆಹ, ಪತ್ರಿಕೋದ್ಯಮದ ಪ್ರಾಥಮಿಕ ಹಂತದ ತಿಳಿವಳಿಕೆ ಸೇರಿದಂತೆ ನಾನಾ ವಿಷಯಗಳ ಬಗ್ಗೆ ತಾಲೂಕು ಮಟ್ಟದಲ್ಲಿನ ಪತ್ರಕರ್ತರಿಗೆ ತಿಳಿವಳಿಕೆಯ ಕಾರ್ಯಕ್ಷಮತೆ, ಕಾರ್ಯದಕ್ಷತೆ ಹೆಚ್ಚಿಸುವ ದಿಶೆಯಲ್ಲಿ ಕಾರ್ಯಕ್ರಮಗಳನ್ನು, ಕಾರ್ಯಗಾರಗಳನ್ನು ರೂಪಿಸಬೇಕಿದೆ ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಹೇಳಿದರು. ಭಾರತ ಸರ್ಕಾರದ ವಾರ್ತಾ ಶಾಖೆ (ಪಿಐಬಿ) ಬೆಂಗಳೂರು ಹಾಗೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ gua ರಾಯಚೂರು ಕುರಿತು ಇವರ ಸಂಯುಕ್ತಾಶ್ರಯದಲ್ಲಿ ಮಾರ್ಚ್ 25ರಂದು ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಮಾಧ್ಯಮ ಪ್ರತಿನಿಧಿಗಳಿಗೆ ವಾರ್ತಾಲಾಪ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಮಾಧ್ಯಮಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಕಾರ್ಯ ನಿರಂತರವಾಗಿ ಆಗಬೇಕು ಎಂದು ಸಲಹೆ ಮಾಡಿದ ಜಿಲ್ಲಾಧಿಕಾರಿಗಳು, ವಾರ್ತಾಲಾಪದಂತಹ ಕಾರ್ಯಗಾರಗಳು ಈ ರೀತಿಯ ನಿರಂತರ ನಡೆಯಬೇಕು ಎಂದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷರಾದ ಪವನ್ ಕಿಶೋರ್ ಪಾಟೀಲ್ ಅವರು ಮಾತನಾಡಿ, ಕೆಲವು ಯೋಜನೆಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲುದಾರಿಕೆ ಇರುತ್ತದೆ. ಆದ್ದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಗ್ಗೂಡಿ
ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸಬೇಕು. ಜನತೆಗೆ ತಿಳಿಯುವ ಭಾಷೆಯಲ್ಲಿ ಯೋಜನೆಗಳ ಪ್ರಚಾರ ಕಾರ್ಯ ಆಗಬೇಕು. ಬಹಳಷ್ಟು ಯೋಜನೆಗಳ ಮಾಹಿತಿ ಆನಲೈನದಲ್ಲಿ ಲಭ್ಯವಿದ್ದು, ಕನ್ನಡ ಭಾಷೆಯಲ್ಲಿ ಬುಕ್ ಲೆಟ್ ಸಿದ್ದಪಡಿಸಿ ಸಾಮಾನ್ಯ ಜನರಿಗೆ ತಿಳಿಸುವ ಕಾರ್ಯವಾಗಬೇಕು ಎಂದರು. ಭಾರತ ಸರ್ಕಾರದ ವಾರ್ತಾ ಶಾಖೆಯ ಹೆಚ್ಚುವರಿ ಮಹಾ ನಿರ್ದೇಶಕರಾದ ಎಚ್ ಜಿ ರವೀಂದ್ರ ಅವರು ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಗಳ ಪ್ರಚುರಪಡಿಸಲು ಪತ್ರಕರ್ತರು ಹೆಚ್ಚಿನ ಒತ್ತು ಕೊಡಬೇಕು ಎಂದು ಮನವಿ ಮಾಡಿದರು. ಬಡವರು, ಮಹಿಳೆಯರು, ಯುವಕರು, ರೈತರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಪ್ರಧಾನ ಮಂತ್ರಿಗಳು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಈ ಯೋಜನೆಗಳ ಬಗ್ಗೆ ವ್ಯಾಪಕ ಮಾಹಿತಿ ಜನತೆಗೆ ತಲುಪಿಸುವ ಕಾರ್ಯ ಆಗಬೇಕಿದೆ ಎಂದರು. ಜಿಲ್ಲಾ ಪಂಚಾಯತ್ ಸಿಇಓ ಈಶ್ವರ ಕಾಂದೂ ಅವರು ಮಾತನಾಡಿ, ಭಾರತ ಸರ್ಕಾರದ ವಾರ್ತಾ ಶಾಖೆಯಿಂದ ರಾಯಚೂರು ಜಿಲ್ಲೆಯಲ್ಲಿ ಪತ್ರಕರ್ತರಿಗೆ ಕಾರ್ಯಗಾರ ಹಮ್ಮಿಕೊಂಡಿದ್ದು ಶ್ಲಾಘನೀಯ ಕಾರ್ಯ ಎಂದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಆರ್ ಗುರುನಾಥ್ ಅವರು
ಮಾತನಾಡಿ, ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ರಾಯಚೂರು ಜಿಲ್ಲೆಯಲ್ಲಿ ಬಹುತೇಕ ಸಣ್ಣ ಪತ್ರಿಕೆಗಳು ಸ್ವತಂತ್ರವಾಗಿ ಮುದ್ರಣ ಯಂತ್ರಗಳನ್ನು ಹೊಂದಿ ಉತ್ತಮವಾಗಿ ಮುದ್ರಣವಾಗುತ್ತಿವೆ ಎಂದು ತಿಳಿಸಿದರು. ರಾಯಚೂರು ರಿಪೋರ್ಟಸ್್ರ ಗಿಲ್ಡನ ಜಿಲ್ಲಾ ಅಧ್ಯಕ್ಷರಾದ ವಿಜಯಕುಮಾರ ಜಾಗಟಗಲ್ ಅವರು ಮಾತನಾಡಿ, ಯೋಜನೆಗಳ ಪ್ರಚಾರದ ಜೊತೆಗೆ ಆ ಯೋಜನೆಗಳ ಅನುಷ್ಠಾನದಲ್ಲಿನ ಸಾಧಕ ಬಾಧಕಗಳ ಬಗ್ಗೆ ಸಹ ನಿರಂತರವಾಗಿ ಚರ್ಚಿಸುವ ಕಾರ್ಯ ಆಗಬೇಕು ಎಂದು ತಿಳಿಸಿದರು. ರಾಯಚೂರಿನ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಗವಿಸಿದ್ದಪ್ಪ ಹೊಸಮನಿ ಮಾತನಾಡಿದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್ ಜೆ ಕುಮಾರಸ್ವಾಮಿ, ಜಿಪಂ ಯೋಜನಾ ನಿರ್ದೇಶಕರಾದ ಶರಣ ಬಸವರಾಜ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರಬಾಬು ಸೇರಿದಂತೆ ಇತರರು ಉಪಸ್ಥಿತರಿದ್ದರು. ಭಾರತ ಸರ್ಕಾರದ ವಾರ್ತಾ ಶಾಖೆಯ ಸಹಾಯಕ ನಿರ್ದೇಶಕರಾದ ಮಧು ಸ್ವಾಗತಿಸಿದರು.
What's Your Reaction?



