ಮಹಿಳಾ ಸಬಲೀಕರಣಕ್ಕೆ ಶಿಕ್ಷಣ ಅತ್ಯಗತ್ಯ ಶಾಸಕರಾದ ಬಸನಗೌಡ ತುರ್ವಿಹಾಳ ಸಲಹೆ/ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಮಸ್ಕಿ : ಮಹಿಳೆಯರು ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಜೀವನ ರೂಪಿಸಿಕೊಳ್ಳಬೇಕು ಎಂದು ಖಾದಿ ಮತ್ತು ಗ್ರಾಮಾದ್ಯೋಗ ಮಂಡಳಿಯ ಅಧ್ಯಕ್ಷರು ಮತ್ತು ಶಾಸಕರಾದ ಶ್ರೀ ಆರ್. ಬಸನಗೌಡ ತುರ್ವಿಹಾಳ ಅವರು ಸಲಹೆ ನೀಡಿದರು.
ಮಸ್ಕಿ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಭಾನುವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ, ತಾಪಂ ಆಶ್ರಯದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಒಬ್ಬ ಮಹಿಳೆ ಶಿಕ್ಷಣ ಪಡೆದರೆ, ಇಡೀ ಕುಟುಂಬದ ಭವಿಷ್ಯ ಸುಭದ್ರವಾಗಿರಲಿದೆ. ಈ ಹಿಂದೆ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯರು ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರು. ಸರ್ವರಿಗೂ ಸಮಾನ ಅವಕಾಶ ಕಲ್ಪಿಸಿದ ಸಂವಿಧಾನದಿಂದ ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ವಿದ್ಯಾವಂತ ಮಹಿಳೆಯರಂತೆ ಇಂದು ಗ್ರಾಮೀಣ ಮಹಿಳೆಯರು ಸ್ವ ಸಹಾಯ ಒಕ್ಕೂಟಗಳಲ್ಲಿ ತೊಡಗಿ ವ್ಯಾಪಾರ ವ್ಯವಹಾರದ ಜ್ಞಾನ ಸಂಪಾದಿಸಿದ್ದಾರೆ. ಕುಟುಂಬ ನಿರ್ವಹಣೆ ಜೊತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುತ್ತಿದ್ದಾರೆ. ರಾಜ್ಯ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳು ಮಹಿಳಾ ಸಬಲೀಕರಣದಲ್ಲಿ ಮಹತ್ತರ ಪಾತ್ರ ನಿಭಾಯಿಸಿವೆ. ಮಹಿಳೆಯರು ಸಾರಿಗೆ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಿ ತಮ್ಮ ಉತ್ಪನ್ನಗಳ ಮಾರಾಟಕ್ಕೆ ಉತ್ತಮ ಮಾರುಕಟ್ಟೆ ಜೊತೆಗೆ ಸ್ಪರ್ಧಾತ್ಮಕ ಬೆಲೆ ಕಂಡುಕೊಳ್ಳುತ್ತಿದ್ದಾರೆ ಎಂದು ಬಣ್ಣಿಸಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಮರೇಶ್ ಮಾತನಾಡಿ, ಸಾಮಾಜಿಕ, ರಾಜಕೀಯ, ಆರ್ಥಿಕ ಅಸಮಾನತೆಗಳನ್ನು ತೊಡೆದು, ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸುವುದರ ಜೊತೆಗೆ ಅವರ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲು ಪ್ರತಿ ವರ್ಷ ಧ್ಯೇಯ ವಾಕ್ಯದೊಂದಿಗೆ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ. ಇಂದು ಮಹಿಳೆಯರು ರಾಜಕೀಯ, ವಿಜ್ಞಾನ ತಂತ್ರಜ್ಞಾನ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ. ರಾಷ್ಟ್ರಪತಿ, ಕೇಂದ್ರ ಹಣಕಾಸು ಖಾತೆ, ಸೇನೆ ಹೀಗೆ ಸವಾಲಿನ ಕ್ಷೇತ್ರ ಗಳಲ್ಲಿಯೂ ಮಹಿಳೆಯರು ಮುನ್ನುಗ್ಗುತ್ತಿದ್ದಾರೆ. ಮಹಿಳೆಯರ ಸಬಲೀಕರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಪೂರ್ವದಲ್ಲಿ ತಾಪಂ ಆವರಣದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯ ಆಶ್ರಯದಲ್ಲಿ ಏರ್ಪಡಿಸಿದ್ದ ಸಂಜೀವಿನಿ ಮಾಸಿಕ ಸಂತೆ (ಸ್ವ ಸಹಾಯ ಗುಂಪಿನ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ) ಗೆ ಶಾಸಕರು ಚಾಲನೆ ನೀಡಿದರು. ಪ್ರತಿಯೊಂದು ಮಳಿಗೆಗೆ ಭೇಟಿ ನೀಡಿ, ಮಹಿಳೆರೊಂದಿಗೆ ಸಂವಾದ ನಡೆಸಿ, ವ್ಯಾಪಾರ ವಹಿವಾಟು ಕುರಿತು ಮಾಹಿತಿ ಪಡೆದರು. ಈ ವೇಳೆ ಮಹತ್ವಾಕಾಂಕ್ಷೆ ತಾಲೂಕು ಕಾರ್ಯಕ್ರಮದ ಸಂಪೂರ್ಣತಾ ಅಭಿಯಾನದ 2.0 ಗೆ ಚಾಲನೆ ನೀಡಲಾಯಿತು. ಸದರಿ ಕಾರ್ಯಕ್ರಮದಲ್ಲಿ ಉತ್ತಮ ಸೇವೆ ಸಲ್ಲಿಸಿದ ಮಹಿಳಾ ನೌಕರರು, ರಾಯಚೂರು ಜಿಲ್ಲಾ ಉತ್ಸವದ ಕ್ರೀಡಾಕೂಟ ಮತ್ತು ಜಿಲ್ಲಾ ಕ್ರೀಡಾಕೂಟದಲ್ಲಿ ಪ್ರಶಸ್ತಿ ಪುರಸ್ಕೃತ ಮಹಿಳಾ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಇದೇ ವೇಳೆ ಸ್ಥಳೀಯ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮಹಿಳೆಯರ ಆರೋಗ್ಯ ತಪಾಸಣೆ ಕೈಗೊಂಡು ಔಷಧ ಉಚಿತ ವಿತರಿಸಿದರು. ತದ ನಂತರ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು. ಈ ವೇಳೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಮಹಿಬೂಬ್ ಸಾಬ್ ಮುದ್ದಾಪುರ, ತಹಸೀಲ್ದಾರ್ ರಾದ ಮಂಜುನಾಥ ಭೋಗಾವತಿ, ಸಹಾಯಕ ನಿರ್ದೇಶಕರಾದ ಸೋಮನಗೌಡ ಪಾಟೀಲ್, ಗ್ಯಾರಂಟಿ ಯೋಜನೆಗಳ ತಾಲೂಕು ಸಮಿತಿಯ ಸದಸ್ಯರು ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಇದ್ದರು.
What's Your Reaction?



