ಪರಿಶಿಷ್ಟ ಜಾತಿಗೆ ಸೇರಿಸಲು ಮಡಿವಾಳ ಸಮಾಜ ಆಗ್ರಹಿಸಿ ಮಾರ್ಚ್16 ರಂದು ಬೃಹತ್ ಪ್ರತಿಭಟನೆ

ಮಸ್ಕಿ: ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘ (ರಿ) ಹಾಗೂ ಉತ್ತರ ಕರ್ನಾಟಕ ಮಡಿವಾಳರ ಸಂಘ (ರಿ) ವತಿಯಿಂದ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಆಗ್ರಹಿಸಿ ಮಾರ್ಚ್16 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಂಘದ ಯುವ ಘಟಕ ಅಧ್ಯಕ್ಷ ದುರ್ಗಪ್ಪ ಮಡಿವಾಳ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Mar 15, 2026 - 10:18
 0  12
ಪರಿಶಿಷ್ಟ ಜಾತಿಗೆ ಸೇರಿಸಲು ಮಡಿವಾಳ ಸಮಾಜ ಆಗ್ರಹಿಸಿ ಮಾರ್ಚ್16 ರಂದು ಬೃಹತ್ ಪ್ರತಿಭಟನೆ

ಶ್ರೀ ಬಸವ ಮಾಚಿದೇವ ಮಹಾಸ್ವಾಮೀಜಿ ಚಿತ್ರದುರ್ಗ ಹಾಗೂ ಶ್ರೀ ಮುಕ್ತಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಲಿದೆ ಎಂದು ಅವರು ತಿಳಿಸಿದರು. 

ಮಡಿವಾಳ ಸಮಾಜವು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದು, ಹಲವು ದಶಕಗಳಿಂದ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆಂಬ ಬೇಡಿಕೆ ಮುಂದುವರಿದಿದ್ದರೂ ಸರ್ಕಾರಗಳು ಇದುವರೆಗೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು.

2009 ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಪ್ರೊಫೆಸರ್ ಡಾ. ಅನ್ನಪೂರ್ಣ ಅವರ ನೇತೃತ್ವದಲ್ಲಿ ನಡೆದ ಕುಲಶಾಸ್ತ್ರ ಅಧ್ಯಯನದ ವರದಿ 2011ರಲ್ಲಿ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಅದರಲ್ಲಿ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಶಿಫಾರಸು ಮಾಡಲಾಗಿದೆ. ಆದರೆ ಈ ವರದಿ ಇಂದಿಗೂ ಜಾರಿಯಾಗದೆ ಸಮಾಜ ಕಲ್ಯಾಣ ಇಲಾಖೆಯಲ್ಲಿಯೇ ಬಾಕಿ ಉಳಿದಿದೆ ಎಂದು ಅವರು ಹೇಳಿದರು. ರಾಜ್ಯದ 19 ಮಂತ್ರಿಗಳು ಹಾಗೂ 137 ಶಾಸಕರಿಂದ ಸೇರಿ ಒಟ್ಟು 156 ಶಿಫಾರಸು ಪತ್ರಗಳನ್ನು ಪಡೆದು ಸರ್ಕಾರಕ್ಕೆ ಸಲ್ಲಿಸಿದ್ದರೂ ಸಹ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಳ್ಳದಿರುವುದು ವಿಷಾದನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆದ್ದರಿಂದ ರಾಜ್ಯದ ಎಲ್ಲಾ ಮಡಿವಾಳ ಸಮುದಾಯದ ಜನರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸರ್ಕಾರಿ ನೌಕರರು ಹಾಗೂ ಸಮಾಜದ ಎಲ್ಲಾ ಕುಲಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿ ಸಮಾಜದ ಹಕ್ಕಿಗಾಗಿ ಧ್ವನಿ ಎತ್ತಬೇಕು ಎಂದು ಅವರು ಕರೆ ನೀಡಿದರು.

 ಕೆ ದುರ್ಗಪ್ಪ, ದೇವಪ್ಪ, ದೇವಪ್ಪ ತುಪ್ಪದೂರು, ಲಕ್ಷ್ಮಣ್ ಚಿಕ್ಕದಿನ್ನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

What's Your Reaction?

like

dislike

love

funny

angry

sad

wow