ಸ್ವಚ್ಛತೆಯ ಶಕ್ತಿಗೆ ಗೌರವ: ಮಸ್ಕಿ ಪುರಸಭೆಯಲ್ಲಿ ಮಹಿಳಾ ಪೌರಕಾರ್ಮಿಕರಿಗೆ ಭವ್ಯ ಸನ್ಮಾನ

ಮಸ್ಕಿ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ರಾಜ್ಯ ಸರ್ಕಾರದ ಸ್ವಚ್ಛ ಭಾರತ್ ಮಿಷನ್ (ನಗರ) ಯೋಜನೆಯಡಿ ನೀಡಿದ ಸುತ್ತೋಲೆಯಂತೆ ಮಸ್ಕಿ ಪುರಸಭೆಯಲ್ಲಿ ಮಹಿಳಾ ಪೌರಕಾರ್ಮಿಕರ ಸೇವೆಯನ್ನು ಗೌರವಿಸುವ ಕಾರ್ಯಕ್ರಮ ಶುಕ್ರವಾರ ಬೆಳಿಗ್ಗೆ ಭಾವಪೂರ್ಣವಾಗಿ ನಡೆಯಿತು.

Mar 13, 2026 - 17:10
 0  5
ಸ್ವಚ್ಛತೆಯ ಶಕ್ತಿಗೆ ಗೌರವ: ಮಸ್ಕಿ ಪುರಸಭೆಯಲ್ಲಿ ಮಹಿಳಾ ಪೌರಕಾರ್ಮಿಕರಿಗೆ ಭವ್ಯ ಸನ್ಮಾನ

ನಗರಾಭಿವೃದ್ಧಿ ಇಲಾಖೆಯ ಅಧೀನದಲ್ಲಿರುವ ಸ್ವಚ್ಛ ಭಾರತ್ ಮಿಷನ್ 2.0 ಯೋಜನೆಯ ಮಾಹಿತಿ, ಶಿಕ್ಷಣ ಹಾಗೂ ಸಂವಹನ ಘಟಕದಡಿ 2026ರ ಮಾರ್ಚ್ 8ರಿಂದ 14ರವರೆಗೆ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಸರ್ಕಾರ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಮಹಿಳಾಪೌರಕಾರ್ಮಿಕರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮವನ್ನು ಮಸ್ಕಿ ಪುರಸಭೆ ಆಯೋಜಿಸಿತು.ಈ ಕಾರ್ಯಕ್ರಮದಲ್ಲಿ ಮಸ್ಕಿ ಪುರಸಭೆಯ ಅಧ್ಯಕ್ಷರಾದ ಸುರೇಶ ಅರಸೂರು, ಮುಖ್ಯಾಧಿಕಾರಿಗಳಾದ ನರಸರಡ್ಡಿ, ಉಪಾಧ್ಯಕ್ಷೆಯಾದ ಗೀತಮ್ಮ ಶಿವರಾಜ ಅವರು ಮಹಿಳಾ ಪೌರಕಾರ್ಮಿಕರು ಮತ್ತು ಸಮುದಾಯ ಸಂಯೋಜಕರನ್ನು ಗೌರವಿಸಿ ಸನ್ಮಾನಿಸಿದರು. ನಿತ್ಯವೂ ನಗರವನ್ನು ಸ್ವಚ್ಛವಾಗಿ ಉಳಿಸಲು ಶ್ರಮಿಸುತ್ತಿರುವ ಮಹಿಳೆಯರ ಸೇವೆ ಸಮಾಜಕ್ಕೆ ಆದರ್ಶವಾಗಿದೆ ಎಂದು ಗಣ್ಯರು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ಮಾತನಾಡಿದ ಪುರಸಭೆ ಅಧ್ಯಕ್ಷರು, “ನಗರದ ಸ್ವಚ್ಛತೆ ಕಾಪಾಡುವಲ್ಲಿ ಮಹಿಳಾ ಪೌರಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದು. ಅವರು ಯಾವುದೇ ಹಂಗಿಲ್ಲದೆ ಜನರ ಆರೋಗ್ಯ ಮತ್ತು ನಗರದ ಶುಚಿತ್ವಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಇಂತಹ ಮಹಿಳೆಯರನ್ನು ಗುರುತಿಸಿ ಗೌರವಿಸುವುದು ನಮ್ಮ ಕರ್ತವ್ಯ” ಎಂದು ಹೇಳಿದರು.ಸರ್ಕಾರದ ನಿರ್ದೇಶನದಂತೆ ಸ್ವಚ್ಛತಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರ ಸಾಧನೆಯನ್ನು ಜನತೆಗೆ ಪರಿಚಯಿಸುವ ಉದ್ದೇಶದಿಂದ ಡಿಜಿಟಲ್ ಸ್ಪಾಟ್ ಲೈಟ್ ಸ್ಟೋರೀಸ್, ಸಫಾಯಿ ಮಿತ್ರ ಸುರಕ್ಷಾ ಶಿಬಿರಗಳು, ಹಾಗೂ ಸ್ವಸಹಾಯ ಗುಂಪುಗಳ ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಆಯೋಜಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.ನಗರದ ನೈರ್ಮಲ್ಯ ಕಾಪಾಡುವಲ್ಲಿ ಮಹಿಳೆಯರ ಪಾತ್ರವನ್ನು ಗುರುತಿಸುವುದು ಮಾತ್ರವಲ್ಲದೆ, ಪೌರಕಾರ್ಮಿಕರ ಆರೋಗ್ಯ ತಪಾಸಣೆ, ತ್ಯಾಜ್ಯ ನಿರ್ವಹಣೆ ಕುರಿತು ತರಬೇತಿ, ಹಾಗೂ ಮನೆಮನೆಗೆ ಭೇಟಿ ನೀಡಿ ತ್ಯಾಜ್ಯ ವಿಂಗಡಣೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಗಳನ್ನೂ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಲಾಯಿತು.ಈ ಸಂದರ್ಭದಲ್ಲಿ ಪುರಸಭೆಯ ಸಿಬ್ಬಂದಿವರ್ಗ, ಪೌರಕಾರ್ಮಿಕರು, ಸಮುದಾಯ ಸಂಯೋಜಕರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

What's Your Reaction?

like

dislike

love

funny

angry

sad

wow